ಪಾಟ್ನಾ: ಪದವೀಧರೆಯಾಗಿರುವ ಯುವತಿಯೊಬ್ಬರು ಯಾವುದೇ ಉದ್ಯೋಗ ಸಿಗದೆ ಇರುವುದರಿಂದ ಕಾಲೇಜಿನ ಹೊರಗೆ ಚಹಾ ಮಾರಾಟ ಮಾಡುತ್ತಿದ್ದಾರೆ. ಈ ಸುದ್ದಿ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ.
24 ವರ್ಷದ ಅರ್ಥಶಾಸ್ತ್ರ ಪದವೀಧರೆಯಾಗಿರುವ ಪ್ರಿಯಾಂಕ ಎಂಬುವವರು ಪಾಟ್ನಾ ಮಹಿಳಾ ಕಾಲೇಜಿನ ಹೊರಗೆ ಚೈವಾಲಿ ಎಂಬ ಹೆಸರಿನ ಚಹಾ ಅಂಗಡಿಯನ್ನು ತೆರೆದಿದ್ದಾರೆ. ಯುವತಿಗೆ ಎಲ್ಲೂ ಉತ್ತಮ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಟೀ ಅಂಗಡಿ ತೆರೆದಿದ್ದಾರೆ.
ಬಿಹಾರದ ಪುರ್ನಿಯಾ ಮೂಲದ ಪ್ರಿಯಾಂಕಾ ವಾರಣಾಸಿಯ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದಿಂದ ಪದವಿ ಪಡೆದಿದ್ದಾರೆ. ಅವರು ಈ ವರ್ಷ ಏಪ್ರಿಲ್ 11 ರಿಂದ ಪಾಟ್ನಾ ಮಹಿಳಾ ಕಾಲೇಜಿನ ಹೊರಗೆ ಚಹಾ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಅವರ ಅಂಗಡಿ ಚೈವಾಲಿಯಲ್ಲಿ ಪಾನ್ ಟೀ ಮತ್ತು ಚಾಕೊಲೇಟ್ ಟೀ ಸೇರಿದಂತೆ ನಾಲ್ಕು ವಿಶಿಷ್ಟ ಶೈಲಿಯ ಚಹಾವನ್ನು ಒದಗಿಸಲಾಗುತ್ತದೆ.
ಕಳೆದ ಎರಡು ವರ್ಷಗಳಿಂದ ತಾನು ಬ್ಯಾಂಕ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದು, ಇದರಲ್ಲಿ ಉತ್ತೀರ್ಣರಾಗಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ. ಆದರೆ ಸಾಧ್ಯವಾಗಲಿಲ್ಲ. ಹಾಗಾಗಿ ಮನೆಗೆ ಹಿಂದಿರುಗುವ ಬದಲು ಪಾಟ್ನಾದಲ್ಲಿ ಟೀ ಸ್ಟಾಲ್ ಅನ್ನು ಹ್ಯಾಂಡ್ ಕಾರ್ಟ್‌ನಲ್ಲಿ ಸ್ಥಾಪಿಸಲು ನಿರ್ಧರಿಸಿದ್ದಾಗಿ ಅವರು ತಿಳಿಸಿದ್ದಾರೆ.
ನಗರದಲ್ಲಿ ತನ್ನ ಸ್ವಂತ ಟೀ ಸ್ಟಾಲ್ ಸ್ಥಾಪಿಸಲು ತಾನು ಯಾವತ್ತೂ ಹಿಂಜರಿಯುವುದಿಲ್ಲ. ತನ್ನ ಈ ವ್ಯವಹಾರವನ್ನು ಆತ್ಮನಿರ್ಭರ ಭಾರತದತ್ತ ಒಂದು ಹೆಜ್ಜೆಯಾಗಿ ನೋಡುವುದಾಗಿ ಪ್ರಿಯಾಂಕಾ ತಿಳಿಸಿದ್ದಾರೆ.
ಸದ್ಯ, ಈ ಫೋಟೋಗಳು ವೈರಲ್ ಆಗಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಆಕೆಯ ಉದ್ಯಮಶೀಲತೆಯ ಮನೋಭಾವವನ್ನು ಶ್ಲಾಘಿಸಿದ್ದು, ಆಕೆಯನ್ನು ಸ್ಫೂರ್ತಿದಾಯಕ ಎಂದು ಕರೆದಿದ್ದಾರೆ. ಇನ್ನು ಕೆಲವರು ದೇಶದಲ್ಲಿ ಉದ್ಯೋಗ ಕೊರತೆಯ ಬಗ್ಗೆ ವಿಷಾದಿಸಿದ್ದಾರೆ.