ಕಂಪನಿ ಮಾಲೀಕರು ಉದ್ಯೋಗಿಗಳಿಗೆ ಬೋನಸ್ ಕೊಡೋದು, ವರ್ಷಕ್ಕೊಮ್ಮೆಯಾದ್ರೂ ಸಂಬಳದಲ್ಲಿ ಹೆಚ್ಚಳ ಮಾಡೋದು ಕಾಮನ್. ಆದರೆ ಕಂಪನಿಯ ಮಾಲೀಕರು ಉದ್ಯೋಗಿಗೆ ಐಷಾರಾಮಿ ಮನೆಯನ್ನೇ ಉಡುಗೊರೆಯಾಗಿ ನೀಡಿದರೆ ಹೇಗಿರತ್ತೆ ಹೇಳಿ? ಆ ನೌಕರನಿಗೆ ಅದೃಷ್ಟ ಖುಲಾಯಿಸಿದಂತೆಯೇ ಲೆಕ್ಕ.
ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ, ತಮ್ಮ ಹಿರಿಯ ಉದ್ಯೋಗಿ ಮತ್ತು ಸ್ನೇಹಿತ ಮನೋಜ್ ಮೋದಿಗೆ 1500 ಕೋಟಿ ರೂಪಾಯಿ ಮೌಲ್ಯದ 22 ಅಂತಸ್ತಿನ ಐಷಾರಾಮಿ ಕಟ್ಟಡವನ್ನು ಉದಾರವಾಗಿ ಉಡುಗೊರೆಯಾಗಿ ನೀಡಿದ್ದಾರೆ.
ಈ ಮನೆ ಮುಂಬೈನ ಕೇಂದ್ರ ಸ್ಥಳದಲ್ಲಿದೆ. ಅಂಬಾನಿ ದೊಡ್ಡ ಉದ್ಯಮಿ ಮಾತ್ರವಲ್ಲ, ದೊಡ್ಡ ಹೃದಯವನ್ನೂ ಹೊಂದಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಮನೋಜ್ ಮೋದಿ, ರಿಲಯನ್ಸ್ ಇಂಡಸ್ಟ್ರೀಸ್‌ನ ಮಾಲೀಕ ಮುಖೇಶ್ ಅಂಬಾನಿ ಅವರ ಆಪ್ತ. ಕಂಪನಿಯ ಪ್ರಗತಿಯಲ್ಲಿ ಅವರ ಕೊಡುಗೆ ಸಾಕಷ್ಟಿದೆ. ಹಾಗಾಗಿಯೇ ಅವರಿಗೆ ಬಿಗ್ ಗಿಫ್ಟ್ ಕೊಟ್ಟಿದ್ದಾರೆ ಅಂಬಾನಿ. 22 ಅಂತಸ್ತಿನ ಈ ಕಟ್ಟಡ ಮುಂಬೈನ ನೇಪಿಯನ್ ಸೀ ರೋಡ್‌ನಲ್ಲಿದೆ. ಇದಕ್ಕೆ ವೃಂದಾವನ ಎಂದು ಹೆಸರಿಡಲಾಗಿದೆ.
ಅಂಬಾನಿ ಯಶಸ್ಸಿನ ಹಿಂದೆ ಮನೋಜ್ ಮೋದಿ
ಮನೋಜ್ ಮೋದಿ, ರಿಲಯನ್ಸ್ ಜಿಯೋ ಮತ್ತು ರಿಲಯನ್ಸ್ ರಿಟೇಲ್‌ನ ನಿರ್ದೇಶಕರಾಗಿ ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದಾರೆ. ಮನೋಜ್ ಮೋದಿ, ಮುಖೇಶ್ ಅಂಬಾನಿಯ ಆಪ್ತರಲ್ಲಿ ಒಬ್ಬರು. ರಿಲಯನ್ಸ್‌ನ ಎಲ್ಲಾ ವ್ಯವಹಾರ ಒಪ್ಪಂದಗಳ ಹಿಂದೆ ಮನೋಜ್ ಮೋದಿ ಇದ್ದಾರೆ. ಮುಖೇಶ್ ಅಂಬಾನಿ ಅವರು ಉಡುಗೊರೆಯಾಗಿ ನೀಡಿದ ಕಟ್ಟಡವನ್ನು 1.7 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ.
ಇಲ್ಲಿ ದರಗಳು ಪ್ರತಿ ಚದರ ಅಡಿಗೆ 45,100 ರಿಂದ 70,600 ರೂಪಾಯಿಗಳಷ್ಟಿದೆ. ಲೈಮ್‌ಲೈಟ್‌ನಿಂದ ದೂರವಿರುವ ಮನೋಜ್ ಮೋದಿ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸಕ್ರಿಯವಾಗಿಲ್ಲ. ಅವರು ಹಾಜಿರಾ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್, ಜಾಮ್‌ನಗರ ರಿಫೈನರಿ, ಟೆಲಿಕಾಂ ಬಿಸಿನೆಸ್, ರಿಲಯನ್ಸ್ ರಿಟೇಲ್ ಮುಂತಾದ ಹೆಚ್ಚಿನ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಾರೆ.