ಪ್ರತಿ ತಿಂಗಳ ಕೊನೆಯಲ್ಲಿ ಸಂಬಳಕ್ಕಾಗಿ ಎಲ್ಲರೂ ಎದುರು ನೋಡ್ತೇವೆ. ಅಂಥದ್ರಲ್ಲಿ ಒಮ್ಮೆಲೇ ನೂರಾರು ಪಟ್ಟು ಹೆಚ್ಚು ಸಂಬಳ ನಮ್ಮ ಬ್ಯಾಂಕ್ ಖಾತೆಗೆ ಬಂದು ಬಿದ್ದರೆ ಹೇಗಿರತ್ತೆ ಹೇಳಿ ? ಈ ಆಲೋಚನೆಯೇ ಒಂಥರಾ ಖುಷಿ ಕೊಡ್ತಿದೆ ಅಲ್ವಾ?
ಇಲ್ಲೊಬ್ಬ ಉದ್ಯೋಗಿಗೆ ಆಕಸ್ಮಿಕವಾಗಿ ಕಂಪನಿಯಿಂದ ಸಂಬಳದ 286 ಪಟ್ಟು ಹೆಚ್ಚಿನ ಮೊತ್ತ ಪಾವತಿಯಾಗಿತ್ತು. ಹೆಚ್ಚುವರಿ ಹಣವನ್ನು ಹಿಂದಿರುಗಿಸುವುದಾಗಿಯೂ ಆ ನೌಕರ ಸಂಸ್ಥೆಗೆ ಭರವನೆ ಕೊಟ್ಟಿದ್ದ. ಆದ್ರೆ ನಂತರ ರಾಜೀನಾಮೆ ನೀಡಿ ನಾಪತ್ತೆಯಾಗಿದ್ದಾನೆ.
ಚಿಲಿ ದೇಶದಲ್ಲಿ ನಡೆದಿರೋ ಘಟನೆ ಇದು. ಕೋಲ್ಡ್ ಕಟ್‌ಗಳ ಅತಿದೊಡ್ಡ ಉತ್ಪಾದಕರಲ್ಲಿ ಒಂದಾದ ಕನ್ಸೋರ್ಸಿಯೊ ಇಂಡಸ್ಟ್ರಿಯಲ್ ಡಿ ಅಲಿಮೆಂಟೋಸ್ (ಸಿಯಾಲ್) ನಲ್ಲಿ ಆತ ಕೆಲಸ ಮಾಡ್ತಿದ್ದ. ಕಂಪನಿಯು ಆಕಸ್ಮಿಕವಾಗಿ ಉದ್ಯೋಗಿಗೆ 165,398,851 ಚಿಲಿಯ ಪೆಸೊಗಳನ್ನು ಅಂದ್ರೆ ಸುಮಾರು 1.42 ಕೋಟಿ ರೂಪಾಯಿಯನ್ನು ಪಾವತಿಸಿದೆ. ಆತನಿಗೆ ಬರಬೇಕಾಗಿದ್ದ ಸಂಬಳ 43 ಸಾವಿರ ರೂಪಾಯಿ. ಆದ್ರೆ ಕಂಪನಿ 1.42 ಕೋಟಿ ರೂಪಾಯಿಯನ್ನು ಅವನ ಖಾತೆಗೆ ಹಾಕಿಬಿಟ್ಟಿತ್ತು.
ಇದು ಗೊತ್ತಾಗುತ್ತಿದ್ದಂತೆ ಖುದ್ದು ಆ ಉದ್ಯೋಗಿಯೇ ಪಾವತಿಯಲ್ಲಿನ ದೋಷದ ಬಗ್ಗೆ ಕಂಪನಿಯ ಮಾನವ ಸಂಪನ್ಮೂಲ ಇಲಾಖೆಯ ಉಪ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದ. ಕಂಪನಿಯ ಆಡಳಿತ ಮಂಡಳಿ ಆತನ ದಾಖಲೆಗಳನ್ನು ಪರಿಶೀಲಿಸಿತ್ತು. ಉದ್ಯೋಗಿಗೆ ಆತನ ಮಾಸಿಕ ವೇತನದ ಸುಮಾರು 286 ಪಟ್ಟು ಹಣವನ್ನು ತಪ್ಪಾಗಿ ಪಾವತಿಸಲಾಗಿದೆ ಎಂದು ದೃಢಪಡಿಸಿತ್ತು. ಹೆಚ್ಚುವರಿಯಾಗಿ ಪಾವತಿಸಿದ ಹಣವನ್ನು ಹಿಂದಿರುಗಿಸುವಂತೆ ಉದ್ಯೋಗಿಯನ್ನೂ ಕೇಳಿತ್ತು.
ಆತನ ತನಗೆ ಹೆಚ್ಚುವರಿಯಾಗಿ ಪಾವತಿಸಿದ ಮೊತ್ತವನ್ನು ಹಿಂದಿರುಗಿಸಲು ಸಮ್ಮತಿಸಿದ್ದ. ಆದರೆ ಕಂಪನಿ ಬ್ಯಾಂಕ್‌ನಿಂದ ಮರುಪಾವತಿ ಅಧಿಸೂಚನೆಯನ್ನು ಸ್ವೀಕರಿಸದಿದ್ದಾಗ, ಅವರು ಉದ್ಯೋಗಿಯನ್ನು ಸಂಪರ್ಕಿಸಲು ಯತ್ನಿಸಿದ್ದಾರೆ, ಮೆಸೇಜ್ ಹಾಗೂ ಕರೆಗಳನ್ನು ಆತ ಸ್ವೀಕರಿಸಿಲ್ಲ. ನಂತರ ಕಾಲ್ ರಿಸೀವ್ ಮಾಡಿದ ಆತ ನಾನು ನಿದ್ದೆ ಮಾಡುತ್ತಿದ್ದೆ, ಇಂದು ಬ್ಯಾಂಕ್‌ಗೆ ಹೋಗಿ ಹಣ ಹಿಂದಿರುಗಿಸುತ್ತೇನೆ ಎಂದಿದ್ದ.
ಆದ್ರೆ ಜೂನ್ 2ರಂದು ರಾಜೀನಾಮೆ ನೀಡಿ ಇದೀಗ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕಂಪನಿಯು ಆ ವ್ಯಕ್ತಿಗೆ ಆಕಸ್ಮಿಕವಾಗಿ ವರ್ಗಾವಣೆ ಮಾಡಿದ ಹಣವನ್ನು ಹಿಂಪಡೆಯಲು ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.