ಸಂಸ್ಥೆಯ ಅಭಿವೃದ್ಧಿಗಾಗಿ ದುಡಿಯುವ ಉದ್ಯೋಗಿಗಳಿಗೆ ವರ್ಷಕ್ಕೊಮ್ಮೆ ಬೋಸನ್ ಅಥವಾ ಹಬ್ಬಗಳಲ್ಲಿ ಗಿಫ್ಟ್ ಕೊಡೋದನ್ನು ಕೇಳಿರ್ತೀರಾ. ನ್ಯೂಜಿಲೆಂಡ್ನ ಕಂಪನಿಯೊಂದು ಉದ್ಯೋಗಿಗಳಿಗೆ ಇನ್ನೂ ದೊಡ್ಡ ಉಡುಗೊರೆಯನ್ನೇ ಕೊಟ್ಟಿದೆ. ಅನಿಯಮಿತ ರಜೆ ನೀಡುವ ಮೂಲಕ ರಿಲ್ಯಾಕ್ಸ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ರಜೆಯಲ್ಲಿ ಉದ್ಯೋಗಿಗಳು ಆರಾಮಾಗಿ ಪ್ರವಾಸ ಕೂಡ ಮಾಡ್ಬಹುದು.
ನ್ಯೂಜಿಲೆಂಡ್ನ ಆಕ್ಲೆಂಡ್ ನಗರದಲ್ಲಿರುವ ‘ಆಕ್ಷನ್ಸ್ಟೆಪ್’ ಹೆಸರಿನ ಸಾಫ್ಟ್ವೇರ್ ಕಂಪನಿ ಇದು. ಈ ಕಂಪನಿ ತನ್ನ ಉದ್ಯೋಗಿಗಳಿಗೆ ವರ್ಷದಲ್ಲಿ ಒಂದು ತಿಂಗಳು ರಜೆ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ಈ ರೀತಿ ಮಾಡುವುದರಿಂದ ಉದ್ಯೋಗಿಗಳು ಒಂದು ತಿಂಗಳು ಚೆನ್ನಾಗಿ ವಿಶ್ರಾಂತಿ ಪಡೆದು ರಿಫ್ರೆಶ್ ಆಗ್ತಾರಂತೆ. ರಜಾ ಮುಗಿಸಿಕೊಂಡು ಕರ್ತವ್ಯಕ್ಕೆ ಮರಳಿದ ಮೇಲೆ ಶ್ರದ್ಧೆಯಿಂದ ಕೆಲಸ ಮಾಡ್ತಾರೆ. ಇಲ್ಲೊಂದು ಸಣ್ಣ ಷರತ್ತು ಕೂಡ ಇದೆ. ಎಲ್ಲಾ ನೌಕರರು ಒಟ್ಟಿಗೆ ಈ ರಜಾ ತೆಗೆದುಕೊಳ್ಳುವಂತಿಲ್ಲ.
ಈ ಮೊದಲು ಲಿಂಕ್ಡ್ಇನ್ ಮತ್ತು ನೆಟ್ಫ್ಲಿಕ್ಸ್ ಕಂಪನಿಗಳು ಸಹ ಇದೇ ರೀತಿಯ ಪ್ರಯೋಗಗಳನ್ನು ಮಾಡಿವೆ. ಯೂನಿಲಿವರ್ ನ್ಯೂಜಿಲೆಂಡ್ ತನ್ನ ಸಂಸ್ಥೆಯಲ್ಲಿ ನಾಲ್ಕು ದಿನ ಮಾತ್ರ ಕೆಲಸದ ಸಂಸ್ಕೃತಿಯನ್ನು ಪರಿಚಯಿಸುವುದಾಗಿ ಕಳೆದ ವರ್ಷ ಘೋಷಿಸಿತು. ವಾರದಲ್ಲಿ ನಾಲ್ಕೇ ದಿನ ಕೆಲಸ ಮಾಡುವ ಪ್ರಯೋಗವನ್ನು ಪ್ರಾರಂಭಿಸಿದೆ. ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಸಮಯದ ಮೂಲಕ ನಿರ್ಧರಿಸಬಾರದೆಂದು ಈ ಸಂಸ್ಥೆ ಹೇಳಿದೆ.
4 ದಿನ ಕೆಲಸ ಮಾಡುವ ನೌಕರರಿಗೂ ಇಲ್ಲಿ ಪೂರ್ತಿ ಸಂಬಳ ಕೊಡಲಾಗ್ತಿದೆ. ಕೊರೋನಾ ಸಾಂಕ್ರಾಮಿಕದಿಂದಾಗಿ ಪ್ರಪಂಚದಾದ್ಯಂತದ ಕಂಪನಿಗಳು ಕೆಲಸದ ಸಂಸ್ಕೃತಿಯನ್ನು ಬದಲಾಯಿಸಿವೆ. ಈಗ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಸಂತೋಷವಾಗಿಡುವ ಕಡೆಗೆ ಹೆಚ್ಚಿನ ಗಮನ ನೀಡುತ್ತಿವೆ. ಇದಕ್ಕಾಗಿ ಉದ್ಯೋಗಿಗಳಿಗೆ ದೀರ್ಘ ರಜೆ, ಕಡಿಮೆ ಅವಧಿಯ ಕೆಲಸ, ಮನೆಯಿಂದ ಕೆಲಸ ಮತ್ತು ಉತ್ತಮ ಸಂಬಳ ನೀಡುತ್ತಿವೆ. ಇಂತಹ ಸೌಲಭ್ಯಗಳನ್ನು ಒದಗಿಸುವ ಕಂಪನಿಗಳಲ್ಲಿ ಹೆಚ್ಚು ಕಾಲ ಕೆಲಸ ಮಾಡಲು ನೌಕರರು ಕೂಡ ಇಚ್ಛೆಪಡುತ್ತಿದ್ದಾರೆ.