ಕೊರೊನಾ ಸಂದರ್ಭದಲ್ಲಿ ಆರಂಭವಾದ ‘ವರ್ಕ್ ಫ್ರಮ್ ಹೋಂ’ ಪದ್ದತಿಯನ್ನು ಈಗಲೂ ಬಹುತೇಕ ಐಟಿ ಕಂಪನಿಗಳು ಮುಂದುವರಿಸಿಕೊಂಡು ಹೋಗುತ್ತಿವೆ. ಇದರ ಮಧ್ಯೆ ಕೆಲವೊಂದು ಕಂಪನಿಗಳು ತನ್ನ ಉದ್ಯೋಗಿಗಳನ್ನು ಮತ್ತೆ ಕಛೇರಿಗೆ ಕರೆಯಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದು, ಡಿಸೆಂಬರ್ ವೇಳೆಗೆ ಕೊರೊನಾ ಪೂರ್ವದಂತೆ ಕಾರ್ಯಾರಂಭ ಮಾಡಲು ಮುಂದಾಗಿವೆ.
ಇದೀಗ ‘ವರ್ಕ್ ಫ್ರಮ್ ಹೋಮ್’ ಕುರಿತಂತೆ ಐಟಿ ದಿಗ್ಗಜ ಇನ್ಫೋಸಿಸ್ ಮಹತ್ವದ ಹೇಳಿಕೆ ನೀಡಿದೆ. ತನ್ನ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸಿಕೊಳ್ಳುವ ವಿಚಾರದಲ್ಲಿ ಯಾವುದೇ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸುವುದಿಲ್ಲ ಎಂದು ತಿಳಿಸಿದ್ದು, ಉದ್ಯೋಗಿಗಳು ಕಚೇರಿಗೆ ಮರಳುವುದು ಕಡ್ಡಾಯವಲ್ಲವೆಂದು ಹೇಳಿದೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಕಂಪನಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವುದರಿಂದ ಉದ್ಯೋಗಿಗಳಿಗೆ ಕಚೇರಿ ಕೆಲಸಕ್ಕಾಗಿ ನಿರ್ದಿಷ್ಟ ದಿನಗಳನ್ನು ನಿಗದಿಪಡಿಸುವುದಿಲ್ಲ ಎಂದು ಇನ್ಫೋಸಿಸ್ ಕಾರ್ಯನಿರ್ವಾಹಕ ಅಧಿಕಾರಿ ಸಲೀಲ್ ಪರೇಖ್ ಹೇಳಿದ್ದು, ಉದ್ಯೋಗಿಗಳು ಬಯಸುವ ಬೆಂಬಲವನ್ನು ನಾವು ನೀಡುತ್ತೇವೆ ಎಂದಿದ್ದಾರೆ.