ಮುಂದಿನ ಒಂದೂವರೆ ವರ್ಷಗಳಲ್ಲಿ 10 ಲಕ್ಷಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸಚಿವಾಲಯ ಹಾಗೂ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿರುವ ಬೆನ್ನಲ್ಲೆ ರೈಲ್ವೆ ಇಲಾಖೆ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಮುಂದಿನ ವರ್ಷದೊಳಗೆ ಬರೋಬ್ಬರಿ 1,48,463 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಇದು ಕಳೆದ ಎಂಟು ವರ್ಷಗಳಲ್ಲಿ ಅತ್ಯಧಿಕ ನೇಮಕಾತಿ ಎಂದು ಹೇಳಲಾಗಿದೆ. ಈ ಹಿಂದೆ ಪ್ರತಿ ವರ್ಷ ಸರಾಸರಿ 43,678 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಆದರೆ ಈ ಬಾರಿ ಇದು ಮೂರು ಪಟ್ಟು ಹೆಚ್ಚಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸೂಚನೆ ಬೆನ್ನಲ್ಲೇ ಈ ಕ್ರಮಕ್ಕೆ ರೈಲ್ವೆ ಇಲಾಖೆ ಮುಂದಾಗಿದ್ದು, ಈಗಾಗಲೇ ಇದಕ್ಕೆ ಸಿದ್ಧತೆಗಳು ನಡೆದಿವೆ ಎಂದು ತಿಳಿದುಬಂದಿದೆ. ರೈಲ್ವೆ ಇಲಾಖೆ ದೇಶದ ಅತಿದೊಡ್ಡ ಉದ್ಯೋಗದಾತ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ಬಾರಿ ಲಕ್ಷಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ.