ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಬಂಪರ್ ಸುದ್ದಿಯೊಂದು ಇಲ್ಲಿದೆ. ಮುಂದಿನ ಮೂರು ತಿಂಗಳಲ್ಲಿ ದೇಶದ ಶೇ.54 ರಷ್ಟು ಖಾಸಗಿ ಕಂಪನಿಗಳು ನೇಮಕಾತಿಗೆ ಮುಂದಾಗಿದ್ದು, ಹೀಗಾಗಿ ಲಕ್ಷಾಂತರ ಮಂದಿಗೆ ಉದ್ಯೋಗಾವಕಾಶ ಸಿಗಲಿದೆ.
ಹಬ್ಬಗಳ ಹಿನ್ನೆಲೆಯಲ್ಲಿ ಈಗಾಗಲೇ ಆನ್ಲೈನ್ ಶಾಪಿಂಗ್ ಕಂಪನಿಗಳು ನೇಮಕಾತಿಯನ್ನು ಶುರು ಮಾಡಿದ್ದು, ಕೊರೊನಾ ನಂತರ ಮಾರುಕಟ್ಟೆ ಭಾರಿ ಚೇತರಿಕೆ ಕಂಡಿರುವುದೇ ಇದಕ್ಕೆ ಕಾರಣವಾಗಿದೆ. ಆಟೋಮೊಬೈಲ್ ಉದ್ಯಮದಲ್ಲೂ ಈ ಹಿಂದಿನ ಅವಧಿಗಳಿಗೆ ಹೋಲಿಸಿದರೆ ಖರೀದಿ ಹೆಚ್ಚಾಗಿದ್ದು, ಹೀಗಾಗಿ ಅಲ್ಲಿಯೂ ಉದ್ಯೋಗಿಗಳ ನೇಮಕಾತಿ ನಡೆಯುತ್ತಿದೆ.
ಚಿನ್ನದ ವ್ಯಾಪಾರ, ವಸ್ತ್ರೋದ್ಯಮ ವಲಯ ಕೂಡ ಉದ್ಯೋಗಿಗಳ ನೇಮಕಾತಿಗೆ ಒತ್ತು ನೀಡಿವೆ. ಮಹತ್ವದ ಸಂಗತಿ ಎಂದರೆ ಜಾಗತಿಕವಾಗಿ ಉದ್ಯೋಗಿಗಳ ನೇಮಕಾತಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ ಶೇಕಡ 56 ರಷ್ಟು ಕಂಪನಿಗಳು ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿವೆ ಎನ್ನಲಾಗಿದೆ. ಮ್ಯಾನ್ ಪವರ್ ಗ್ರೂಪ್ ಎಂಪ್ಲಾಯ್ಮೆಂಟ್ ಔಟ್ ಲುಕ್ ಸಮೀಕ್ಷೆಯಲ್ಲಿ ಈ ಅಂಶಗಳು ಬಹಿರಂಗವಾಗಿವೆ.