ಟಾಟಾ ಟೆಕ್ನಾಲಜಿಸ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರು ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಈ ಹಿಂದೆ ತಿಳಿಸಿತ್ತು. ಇದೀಗ ಮತ್ತೆ 1 ಸಾವಿರ ಮಂದಿಯ ಹೆಚ್ಚುವರಿ ನೇಮಕಾತಿಗೆ ಕಂಪನಿ ಮುಂದಾಗಿದ್ದು, ಹೀಗಾಗಿ ಒಟ್ಟಾರೆ ನಾಲ್ಕು ಸಾವಿರ ಉದ್ಯೋಗಿಗಳನ್ನು ಟಾಟಾ ಟೆಕ್ನಾಲಜೀಸ್ ನೇಮಿಸಿಕೊಳ್ಳಲಿದೆ.
ಟಾಟಾ ಟೆಕ್ನಾಲಜಿಸ್ ನ ವಹಿವಾಟು ಬೆಳವಣಿಗೆಯು ಉತ್ತಮ ರೀತಿಯಲ್ಲಿರುವ ಕಾರಣ ಕಂಪನಿಯು ಈ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗಿದ್ದು, ಉದ್ಯೋಗಿಗಳ ನೇಮಕಾತಿಯಿಂದ ಗ್ರಾಹಕರ ಅಗತ್ಯಗಳನ್ನು ಈಡೇರಿಸಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.
ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಈ ನೇಮಕಾತಿ ನಡೆಯಲಿದ್ದು, ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಈಗಾಗಲೇ 1500 ಮಂದಿಯನ್ನು ನೇಮಿಸಿಕೊಂಡಿದೆ ಎಂದು ತಿಳಿದುಬಂದಿದೆ.