
ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ ಉದ್ಯಮಿ ಗೌತಮ್ ಅದಾನಿ ಅವರ ಸೊಸೆ ಪರಿಧಿ ಅವರ ಬಗ್ಗೆ ಕುತೂಹಲಕರ ಸಂಗತಿಗಳು ಲಭ್ಯವಾಗಿವೆ. ಪರಿಧಿ ಶ್ರಾಫ್, ಗೌತಮ್ ಅದಾನಿ ಅವರ ಪುತ್ರ ಕರಣ್ ಅದಾನಿ ಅವರ ಪತ್ನಿ. ಕರಣ್ ಅದಾನಿ ಅವರ ಒಟ್ಟು ಆಸ್ತಿ 108 ಬಿಲಿಯನ್ ಅಮೆರಿಕನ್ ಡಾಲರ್. ಕರಣ್, ಅದಾನಿ ಪೋರ್ಟ್ಸ್ ಮತ್ತು SEZ ಲಿಮಿಟೆಡ್‌ನ CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಾನಿ ಕುಟುಂಬವು ತಮ್ಮ ವೈಯಕ್ತಿಕ ವಿಷಯಗಳನ್ನು ಪ್ರಚಾರದಿಂದ ದೂರವಿರಿಸಲು ಇಷ್ಟಪಡುತ್ತದೆ.
ಅದೇ ರೀತಿ ಕರಣ್ ಅದಾನಿ ಅವರ ಪತ್ನಿ ಪರಿಧಿ ಕೂಡ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುತ್ತಿದ್ದಾರೆ. ಪರಿಧಿ ಶ್ರಾಫ್ ಮತ್ತು ಕರಣ್ ಅದಾನಿ 2013 ರಲ್ಲಿ ಗೋವಾದಲ್ಲಿ ವಿವಾಹವಾದರು. ಈ ಮದುವೆ ಸಮಾರಂಭದಲ್ಲಿ ಮುಖೇಶ್ ಮತ್ತು ಅನಿಲ್ ಅಂಬಾನಿ ಕೂಡ ಭಾಗವಹಿಸಿದ್ದರು. ಆನಂದ್ ಮಹೀಂದ್ರಾ, ಅನಿಲ್ ಅಗರ್ವಾಲ್ ಸೇರಿದಂತೆ ಇತರ ಪ್ರಸಿದ್ಧ ಉದ್ಯಮಿಗಳೂ ಬಂದಿದ್ದರು.
ಆಗ ಗುಜರಾತ್ ಸಿಎಂ ಆಗಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸಿ ನವಜೋಡಿಗೆ ಹರಸಿದ್ದು ವಿಶೇಷ. ಅದಾನಿ ಕುಟುಂಬ ಮೂರು ಅದ್ಧೂರಿ ಆರತಕ್ಷತೆ ಸಮಾರಂಭಗಳನ್ನು ಆಯೋಜಿಸಿತ್ತು. ಪರಿಧಿ ಮತ್ತು ಕರಣ್ ದಂಪತಿಗೆ 2016 ರಲ್ಲಿ ಮೊದಲ ಮಗು ಜನಿಸಿದೆ. ಈ ಹೆಣ್ಣು ಮಗುವಿಗೆ ಅನುರಾಧ ಕರಣ್ ಅದಾನಿ ಎಂದು ಹೆಸರಿಡಲಾಗಿದೆ.
ಪರಿಧಿ ಶ್ರಾಫ್ ಅವರ ತಂದೆ ಸಿರಿಲ್, ಭಾರತದ ಅತ್ಯಂತ ಪ್ರಸಿದ್ಧ ಕಾನೂನು ತಜ್ಞರಲ್ಲೊಬ್ಬರು. ಅವರು ಕಾರ್ಪೊರೇಟ್ ಕಾನೂನಿನಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ಭಾರತದ ಅತಿದೊಡ್ಡ ಕಾನೂನು ಸಂಸ್ಥೆಯಾದ ಸಿರಿಲ್ ಅಮರಚಂದ್ ಮಂಗಲದಾಸ್‌ನ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ. ಈ ಸಂಸ್ಥೆಯು ವಿಶ್ವಾದ್ಯಂತ ಕಾನೂನು ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಶ್ರೇಣೀಕರಿಸುತ್ತದೆ. ಪರಿಧಿ ಕೂಡ ತಂದೆಯ ಹಾದಿಯಲ್ಲೇ ಸಾಗಿದ್ದಾರೆ. ತಂದೆಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸೆಲೆಬ್ರಿಟಿಗಳಿಗೆ ಕಾನೂನು ಸಲಹೆ ನೀಡುತ್ತಾರೆ. ಪರಿಧಿ ಮತ್ತು ಆಕೆಯ ತಂದೆ 2020ರಲ್ಲಿ ಸುಮಾರು ಮುಂಬೈನ ವರ್ಲಿಯಲ್ಲಿ 4.5 ಮಿಲಿಯನ್ ಡಾಲರ್ ಮೌಲ್ಯದ ಫ್ಲಾಟ್ ಖರೀದಿಸಿದ್ದಾರಂತೆ. ಪರಿಧಿ ತನ್ನ ತಂದೆಯೊಂದಿಗೆ ಖರೀದಿಸಿದ ಮೂರನೇ ಅಪಾರ್ಟ್ಮೆಂಟ್ ಇದಾಗಿದೆ. ಗೌತಮ್ ಅದಾನಿ ಕುಟುಂಬದ ಸೊಸೆಯಾಗಿದ್ದರೂ ಪರಿಧಿ ಪ್ರಚಾರದಿಂದ ದೂರವೇ ಉಳಿದು, ಕರ್ತವ್ಯದಲ್ಲಿ ತೊಡಗಿಸಿಕೊಂಡಿರೋದು ವಿಶೇಷ.