ಆರ್‌ಪಿಜಿ ಗ್ರೂಪ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರಿಗೆ ಉದ್ಯೋಗಿಯೊಬ್ಬ ಕಳುಹಿಸಿರುವ ರಾಜೀನಾಮೆ ಪತ್ರ ಈಗ ಎಲ್ಲೆಡೆ ಚರ್ಚೆಯಾಗ್ತಾ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೆಸಿಗ್ನೇಶನ್ ಲೆಟರ್ ವೈರಲ್ ಆಗಿದೆ. ಖುದ್ದು ಹರ್ಷ್ ಗೋಯೆಂಕಾ ಅವರೇ ಈ ರಾಜೀನಾಮೆ ಪತ್ರವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಪ್ರೀತಿಯ ಹರ್ಷ್, ಮಜಾನೇ ಬರ್ತಿಲ್ಲ. ನಿಮ್ಮ ಪ್ರಾಮಾಣಿಕ ಉದ್ಯೋಗಿ ರಾಜೇಶ್ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. “ಈ ಪತ್ರ ಚಿಕ್ಕದಾಗಿದೆ ಆದರೆ ಅರ್ಥ ತುಂಬಾ ಆಳವಾಗಿದೆ. ನಾವೆಲ್ಲರೂ ಪರಿಹರಿಸಬೇಕಾದ ಗಂಭೀರ ಸಮಸ್ಯೆ…” ಎಂದು ಹರ್ಷ್ ಗೋಯೆಂಕಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಗೋಯೆಂಕಾ ಅವರ ಪೋಸ್ಟ್‌ಗೆ ಜಾಲತಾಣದಲ್ಲಿ ಭಾರೀ ರೆಸ್ಪಾನ್ಸ್ ಸಿಕ್ಕಿದೆ. ಜನರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಉದ್ಯೋಗಿ ತನ್ನ ಕೆಲಸವನ್ನು ನೆಚ್ಚಿಕೊಳ್ಳಲು ಹಣ ಮಾತ್ರ ಪ್ರೇರಣೆಯಲ್ಲ ಅನ್ನೋದು ಈ ರಾಜೀನಾಮೆ ಪತ್ರದಿಂದ ಸಾಬೀತಾಗಿದೆ ಎಂದು ಕೆಲವರು ವಿಶ್ಲೇಷಿಸಿದ್ದಾರೆ. ಈ ಪತ್ರವು ಆಳವಾದ ಪ್ರಭಾವ ಹೊಂದಿದೆ ಎಂದು ಇನ್ನು ಕೆಲವರು ಕಮೆಂಟ್ ಮಾಡಿದ್ದಾರೆ. ಭಾರತದಲ್ಲಿ ಪ್ರಸಕ್ತ ವರ್ಷ ಉದ್ಯೋಗ ನೇಮಕಾತಿ ಪ್ರಕ್ರಿಯೆ ಸಾಕಷ್ಟು ವೇಗ ಪಡೆದುಕೊಂಡಿದೆ.
ನೌಕ್ರಿ ಹೈರಿಂಗ್ ಔಟ್‌ಲುಕ್ ಸಮೀಕ್ಷೆ 2022ರ ಪ್ರಕಾರ 57 ಪ್ರತಿಶತದಷ್ಟು ನೇಮಕಾತಿದಾರರು ತಮ್ಮ ಸಂಸ್ಥೆಗಳಲ್ಲಿ ಹೊಸ ಮತ್ತು ಬದಲಿ ನೇಮಕಾತಿಗಳನ್ನು ಸೂಚಿಸಿದ್ದಾರೆ. ಕಳೆದ ವರ್ಷದ ಸಮೀಕ್ಷೆಯಲ್ಲಿ ಈ ಪ್ರಮಾಣ ಶೇ.51ರಷ್ಟಿತ್ತು. ಶೇ.62ರಷ್ಟು ನೇಮಕಾತಿದಾರರು ತಮ್ಮ ಸಂಸ್ಥೆಗಳಲ್ಲಿ ಜೂನ್ 2022ರ ವೇಳೆಗೆ ಪ್ರಕ್ರಿಯೆ ಕೋವಿಡ್‌ಗೂ ಮೊದಲಿನ ಸ್ಥಿತಿಗೆ ಮರಳಲಿದೆ ಎಂಬ ನಿರೀಕ್ಷೆ ಇದೆ.