ನೀವೇನಾದ್ರೂ ಉದ್ಯಮ ಪ್ರಾರಂಭಿಸಲು ಯೋಜಿಸುತ್ತಿದ್ದರೆ ಕೇಂದ್ರ ಸರ್ಕಾರದಿಂದ ಹಣಕಾಸಿನ ನೆರವು ಸಿಗುತ್ತದೆ. ಇದರಲ್ಲಿ ನೀವು 50,000 ರೂಪಾಯಿಯಿಂದ 10 ಲಕ್ಷದವರೆಗೆ ಆರ್ಥಿಕ ನೆರವು ಪಡೆಯಬಹುದು.
ಮುದ್ರಾ ಸಾಲ ಯೋಜನೆ: ಕೇಂದ್ರ ಸರ್ಕಾರದ ವಿಶೇಷ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯೂ ಒಂದು. ಈ ಯೋಜನೆಯಡಿ, ನಿಮಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ವಿಶೇಷವೆಂದರೆ ನೀವು ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಪಡೆಯಬಹುದು. ಶುಲ್ಕವನ್ನು ಸಹ ಪಾವತಿಸಬೇಕಾಗಿಲ್ಲ.
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಯಾವುದೇ ಸ್ಥಿರ ಬಡ್ಡಿ ದರವಿಲ್ಲ. ಮುದ್ರಾ ಸಾಲಗಳಿಗೆ ಬ್ಯಾಂಕುಗಳು ವಿವಿಧ ಬಡ್ಡಿ ದರಗಳನ್ನು ವಿಧಿಸಬಹುದು. ಸಾಮಾನ್ಯವಾಗಿ ಕನಿಷ್ಠ ಬಡ್ಡಿ ದರವು 12 ಪ್ರತಿಶತ ಆಗಿರುತ್ತದೆ. ನೀವು ಪಿಎಂ ಮುದ್ರಾ ಸಾಲದ ಪ್ರಯೋಜನವನ್ನು 3 ಹಂತಗಳಲ್ಲಿ ಪಡೆಯಬಹುದು. ಇದರಲ್ಲಿ ಮೊದಲ ಹಂತ ಶಿಶು ಸಾಲ. ಎರಡನೇ ಹಂತ ಕಿಶೋರ್ ಸಾಲ ಮತ್ತು ಮೂರನೇ ಹಂತವು ತರುಣ್ ಸಾಲ.
1. ಶಿಶು ಸಾಲ ಯೋಜನೆ- ಈ ಯೋಜನೆಯಡಿ ನೀವು 50,000 ರೂಪಾಯಿವರೆಗೆ ಸಾಲ ಪಡೆಯಬಹುದು.
2. ಕಿಶೋರ್ ಸಾಲ ಯೋಜನೆ – ಈ ಯೋಜನೆಯಲ್ಲಿ ಸಾಲದ ಮೊತ್ತವನ್ನು 50,000 ರಿಂದ 5 ಲಕ್ಷ ರೂಪಾಯಿವರೆಗೆ ನಿಗದಿಪಡಿಸಲಾಗಿದೆ.
3. ತರುಣ್ ಸಾಲ ಯೋಜನೆ- ತರುಣ್ ಸಾಲ ಯೋಜನೆಯಲ್ಲಿ 5 ಲಕ್ಷದಿಂದ 10 ಲಕ್ಷ ರೂಪಾಯಿವರೆಗೆ ಸಾಲ ತೆಗೆದುಕೊಳ್ಳಬಹುದು.
ಸಣ್ಣ ಉದ್ಯಮಿಗಳಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಅಂಗಡಿ ಮಾಲೀಕರು, ಹಣ್ಣು-ತರಕಾರಿ ಮಾರಾಟಗಾರರು, ಸಣ್ಣ ಪ್ರಮಾಣದ ಕೈಗಾರಿಕೆಗಳು, ಆಹಾರ-ಸೇವಾ ಘಟಕಗಳು, ದುರಸ್ತಿ ಅಂಗಡಿಗಳು, ಆಹಾರ ಸಂಸ್ಕರಣಾ ಘಟಕಗಳು ಈ ಯೋಜನೆಯ ಲಾಭ ಪಡೆಯಬಹುದು.
ಸರ್ಕಾರಿ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು, ವಿದೇಶಿ ಬ್ಯಾಂಕ್‌ಗಳು, ಗ್ರಾಮೀಣ ಬ್ಯಾಂಕ್‌ಗಳು ಮತ್ತು ಸಹಕಾರಿ ಬ್ಯಾಂಕ್‌ಗಳಿಂದ ಈ ಸಾಲವನ್ನು ಪಡೆಯಬಹುದು. ಮುದ್ರಾ ಸಾಲವನ್ನು ವಿತರಿಸಲು 27 ಸರ್ಕಾರಿ ಬ್ಯಾಂಕ್‌ಗಳು, 17 ಖಾಸಗಿ ಬ್ಯಾಂಕ್‌ಗಳು, 31 ಗ್ರಾಮೀಣ ಬ್ಯಾಂಕ್‌ಗಳು, 4 ಸಹಕಾರಿ ಬ್ಯಾಂಕ್‌ಗಳು, 36 ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮತ್ತು 25 ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ (NBFC) ಆರ್‌ಬಿಐ ಅಧಿಕಾರ ನೀಡಿದೆ.
ಲೋನ್ ತೆಗೆದುಕೊಳ್ಳಲು ಅಧಿಕೃತ ವೆಬ್‌ಸೈಟ್ http://www.mudra.org.in/ ಗೆ ವಿಸಿಟ್ ಮಾಡಿ. ಇಲ್ಲಿಂದ ಫಾರ್ಮ್ ಡೌನ್‌ಲೋಡ್ ಮಾಡಿಕೊಂಡು ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ನಿಮ್ಮಿಂದ ಕೆಲಸದ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುತ್ತಾರೆ. ಅದರ ಆಧಾರದ ಮೇಲೆ, PMMY ನಿಮಗೆ ಸಾಲವನ್ನು ಅನುಮೋದಿಸುತ್ತದೆ.