ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಶಿವಸೇನೆ 25 ವರ್ಷಗಳನ್ನ ವ್ಯರ್ಥ ಮಾಡಿಕೊಂಡಿದೆ ಎಂಬ ಉದ್ಧವ್ ಠಾಕ್ರೆ ಹೇಳಿಕೆ ಮಹಾರಾಷ್ಟ್ರದ ಮಹಾನಾಯಕರ ವಾಗ್ಯುದ್ಧಕ್ಕೆ ಕಾರಣವಾಗಿದೆ. ಬಿಜೆಪಿ ಹಿಂದುತ್ವದ ಬಗ್ಗೆ ಮಾತನಾಡಿರುವ ಮಹಾರಾಷ್ಟ್ರ ಸಿಎಂ ವಿರುದ್ಧ ಮಾಜಿ ಸಿಎಂ ದೇವೆಂದ್ರ ಫಡ್ನವಿಸ್ ವಾಗ್ದಾಳಿ ನಡೆಸಿದ್ದಾರೆ.
ಉದ್ಧವ್ ಠಾಕ್ರೆ ಇತಿಹಾಸವನ್ನು ಮರೆತಿದ್ದಾರೆ. ಶಿವಸೇನೆಯು 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದಿರುವ ಅವರು, ಬಾಳಾಸಾಹೇಬ್ ಠಾಕ್ರೆಯವರು ಬದುಕಿರುವವರೆಗು ಈ ಮೈತ್ರಿಕೂಟದ ನಾಯಕರಾಗಿದ್ದರು ಎಂಬುದನ್ನು ಮರೆತಿದ್ದಾರೆ. ಬಾಳಾಸಾಹೇಬ್ ಅವರು 2012ರವರೆಗು ಮಹಾರಾಷ್ಟ್ರದ ಬಿಜೆಪಿ ಹಾಗೂ ಶಿವಸೇನೆಯ ನಾಯಕರಾಗಿದ್ದರು. ಪಕ್ಷದ ಸಂಸ್ಥಾಪಕರೆ ಮೈತ್ರಿಯನ್ನ ಮುಂದುವರೆಸಿದರು. ಆದರೆ ಉದ್ಧವ್ ಅವ್ರ ಈ ಹೇಳಿಕೆ ಬಾಳಾಸಾಹೇಬ್ ಅವರ ನಿರ್ಧಾರವನ್ನೆ ಪ್ರಶ್ನಿಸುವಂತಿದೆ ಎಂದು ಫಡ್ನವಿಸ್ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ.
ಶಿವಸೇನೆ ಅಸ್ತಿತ್ವಕ್ಕೆ ಬರುವ ಮೊದಲು ಮಹಾರಾಷ್ಟ್ರದಲ್ಲಿ ಬಿಜೆಪಿ ಕಾರ್ಪೊರೇಟರ್‌ಗಳು ಮತ್ತು ಶಾಸಕರು ಇದ್ದರು ಎಂಬುದನ್ನು ನಾನು ಅವರಿಗೆ ನೆನಪಿಸುತ್ತೇನೆ. ಶಿವಸೇನೆಯ ಮೊದಲ ಮುಖ್ಯಮಂತ್ರಿ ಮನೋಹರ್ ಜೋಷಿ ಅವರು ಲೋಕಸಭೆ ಚುನಾವಣೆಯಲ್ಲಿ ನಮ್ಮ ಬೆಜೆಪಿ ಚಿಹ್ನೆಯ ಮೇಲೆ ಸ್ಪರ್ಧಿಸಿದ್ದರು. ಶಿವಸೇನೆ, ಬಿಜೆಪಿಯೊಂದಿಗೆ ಮೈತ್ರಿಯಲ್ಲಿದ್ದಾಗ ರಾಜ್ಯದಲ್ಲಿ ನಂಬರ್ ಒನ್ ಪಕ್ಷವಾಗಿತ್ತು, ಈಗ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ ಎಂದು ಫಡ್ನವೀಸ್ ಶಿವಸೇನೆ ನಾಯಕರ ಕಾಲೆಳೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದವರು, ರಾಮ ಮಂದಿರದ ವಿಚಾರವನ್ನು ಪ್ರಸ್ತಾಪಿಸಿದ ಬಿಜೆಪಿ ಕಾರ್ಯಕರ್ತರಿಗೆ ಲಾಠಿ ಚಾರ್ಜ್ ಉಡುಗೊರೆ ಸಿಗುತ್ತಿದೆ. ಮೋದಿಜಿಯವರು ರಾಮಮಂದಿರವನ್ನು ಸ್ಥಾಪನೆ ಮಾಡುತ್ತಿದ್ದಾರೆ ಎಂಬುದನ್ನು ಅವರು ಮರೆತಂತಿದೆ ಎಂದು ಉದ್ಧವ್ ಹಿಂದುತ್ವದ ಹೇಳಿಕೆಗೆ ಫಡ್ನವೀಸ್ ಟಾಂಗ್ ಕೊಟ್ಟಿದ್ದಾರೆ.
ಹಾಜಿ ಮಲಂಗ್ ದರ್ಗಾಕ್ಕಾಗಿ, ಕಲ್ಯಾಣ ದುರ್ಗದಿ ಕೋಟೆಗೆ ಮಹಾರಾಷ್ಟ್ರ ಸರ್ಕಾರ ಏನು ಮಾಡಿದೆ ಎಂಬುದನ್ನು ಉತ್ತರಿಸಬೇಕು. ಈ ಒಂದು ವಿಷಯವೆ ಸಾಕು ಅವರ ಹಿಂದುತ್ವ ಕೇವಲ ಕಾಗದದ ಮೇಲಿದೆ ಎಂಬುದನ್ನು ತೋರಿಸುವುದಕ್ಕೆ. ಉದ್ಧವ್ ಅವ್ರಿಗೆ ಉಸ್ಮಾನಾಬಾದ್ ಅನ್ನು ಧಾರಾಶಿವ್ ಅಥವಾ ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮರುನಾಮಕರಣ ಮಾಡಲು ಸಾಧ್ಯವಾಗುತ್ತಿಲ್ಲ. ನಾವು ಬಾಳಾಸಾಹೇಬ್ ಅವರನ್ನು ತುಂಬಾ ಗೌರವಿಸುತ್ತೇವೆ ಆದರೆ ಅವ್ರ ಮಿತ್ರಪಕ್ಷದ ಒಬ್ಬ ನಾಯಕರು ಯಾರದರು ಬಾಳಾಸಾಹೇಬ್ ಠಾಕ್ರೆ ಅವರ ಜನ್ಮ ವಾರ್ಷಿಕೋತ್ಸವದಂದು ಒಂದು ಟ್ವೀಟ್ ಮಾಡಿದ್ರ ಎಂದು ಪ್ರಶ್ನಸಿರುವ ಫಡ್ನವೀಸ್, ಉದ್ಧವ್ ಠಾಕ್ರೆ ಇನ್ನು ಮುಂದೆ ಹಿಂದುತ್ವದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.