
ಮಹಾರಾಷ್ಟ್ರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಏಕನಾಥ್ ಶಿಂಧೆ – ದೇವೇಂದ್ರ ಫಡ್ನವಿಸ್ ಸರ್ಕಾರ 164 ಮತಗಳನ್ನು ಗಳಿಸುವ ಮೂಲಕ ಮಹತ್ತರ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗಿದೆ. ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬೆಂಬಲವನ್ನು ನೀಡಿದ ರಾಜಕಾರಣಿಗಳು ಸೇರಿದಂತೆ 40 ಕ್ಕೂ ಹೆಚ್ಚು ಶಿವಸೇನೆ ಶಾಸಕರು ಸರ್ಕಾರದ ಪರ ಕಾಣಿಸಿಕೊಂಡರು.
ಶಿವಸೇನೆಯ ಸಂತೋಷ್ ಬಂಗಾರ್ ಮತ್ತು ಶ್ಯಾಮಸುಂದರ್ ಶಿಂಧೆ, ಏಕನಾಥ್ ಶಿಂಧೆ ಬಣವನ್ನು ಫ್ಲೋರ್ ಟೆಸ್ಟ್ಗೆ ಕೆಲವೇ ಗಂಟೆಗಳ ಮೊದಲು ಸೇರಿದರು.
ಠಾಕ್ರೆಗೆ ತಮ್ಮ ಬೆಂಬಲ ಇದೆ ಎಂದು ಹೇಳಿದ್ದ ಕಲಮನೂರಿ ಶಾಸಕ ಸಂತೋಷ್ ಸಾರ್ವಜನಿಕವಾಗಿ ಕಣ್ಣೀರು ಹಾಕಿ, ಉದ್ಧವ್ ಸರ್ಕಾರಕ್ಕೆ ಬೆಂಬಲ ನೀಡಿ ಎಂದು ಪಕ್ಷದ ಉಳಿದ ಶಾಸಕರನ್ನು ಕೈಮುಗಿದು ಅಳುತ್ತಾ ಕೋರಿದ್ದರು. ಶಿಂಧೆ ಅಧಿಕಾರಕ್ಕೆ ದ್ರೋಹ ಮಾಡುತ್ತಿದ್ದಾರೆಂದು ಆರೋಪ ಮಾಡಿದ್ದರು. ಆದರೆ ಹಿಂದಿನ ರಾತ್ರಿ ಅವರು ಶಿಂಧೆ ಪಾಳೆಯ ಸೇರಿಕೊಂಡಿದ್ದರು.
ಸೋಮವಾರ ಶಿಂಧೆ ವಿಶ್ವಾಸಮತ ಯಾಚನೆಯಲ್ಲಿ ಗೆದ್ದಿದ್ದಾರೆ. 288 ಸದಸ್ಯರ ಸದನದಲ್ಲಿ, 164
ಶಾಸಕರು ವಿಶ್ವಾಸಮತ ಯಾಚನೆಗೆ ಪರ ಮತ ಚಲಾಯಿಸಿದರೆ, 99 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು. ಮೂವರು ಶಾಸಕರು ಮತದಾನದಿಂದ ದೂರ ಉಳಿದರೆ, ಕಾಂಗ್ರೆಸ್ನ ಅಶೋಕ್ ಚವಾಣ್ ಮತ್ತು ವಿಜಯ್ ವಡೆತ್ತಿವಾರ್ ವಿಶ್ವಾಸ ಮತದ ವೇಳೆ ಗೈರು ಹಾಜರಾಗಿದ್ದರು.