ಕಳೆದ ಕೆಲ ತಿಂಗಳಿಂದ ರಾಜ್ಯದಲ್ಲಿ ನಡೆದಿರುವ ಹಲವು ಕಾಮಗಾರಿಗಳ ಕುರಿತು ಅಪಸ್ವರ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೆಲವೊಂದು ಕಾಮಗಾರಿಗಳು ಉದ್ಘಾಟನೆಗೂ ಮುನ್ನವೇ ಕುಸಿದು ಬೀಳುವ ಮೂಲಕ ಕಳಪೆ ಎಂದು ಸಾಬೀತಾದರೆ ಮತ್ತೆ ಕೆಲವು ಕಾಮಗಾರಿಗಳು ಉದ್ಘಾಟನೆ ಬಳಿಕ ಗುತ್ತಿಗೆದಾರರ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತಿವೆ.
ಇದಕ್ಕೆ ಪುಷ್ಟಿ ನೀಡುವಂತೆ ಈಗ ಮತ್ತೊಂದು ಪ್ರಕರಣ ನಡೆದಿದ್ದು, ಬೆಳಗಾವಿ ನಗರದ ಟಿಳಕವಾಡಿ ಮೂರನೇ ರೈಲ್ವೆ ಗೇಟ್ ಮೇಲ್ಸೇತುವೆಯಲ್ಲಿ ಉದ್ಘಾಟನೆಗೊಂಡ ನಾಲ್ಕು ದಿನಕ್ಕೇ ಗುಂಡಿಗಳು ಬಿದ್ದಿದ್ದು, ಗುತ್ತಿಗೆದಾರ ತರಾತುರಿಯಲ್ಲಿ ಅದನ್ನು ಮುಚ್ಚುವ ಕೆಲಸ ಮಾಡಿ ಕೈ ತೊಳೆದುಕೊಂಡಿದ್ದಾನೆ.
ಖಾನಾಪುರ ರಸ್ತೆಯಲ್ಲಿ ರೈಲ್ವೆ ಕ್ರಾಸಿಂಗ್ ಕಾರಣಕ್ಕೆ ಟ್ರಾಫಿಕ್ ಸಮಸ್ಯೆ ಉದ್ಭವವಾಗುತ್ತಿದ್ದ ಕಾರಣ 2019ರಲ್ಲಿ ಅಂದು ಸಂಸದರಾಗಿದ್ದ ಸುರೇಶ್ ಅಂಗಡಿ ಮೇಲ್ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 18 ಕೋಟಿ ರೂಪಾಯಿ ವೆಚ್ಚದಲ್ಲಿ ಇದು ನಿರ್ಮಾಣಗೊಂಡಿದ್ದು, ಇದೀಗ ಉದ್ಘಾಟನೆಗೊಂಡ ನಾಲಕ್ಕೆ ದಿನಕ್ಕೆ ಗುಂಡಿ ಬಿದ್ದಿದೆ.