ವಿಯೆಟ್ನಾಂನಲ್ಲಿ ವಿಶ್ವದ ಅತಿ ಉದ್ದದ ಗಾಜಿನ ಸೇತುವೆಯು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಪ್ರವಾಸಿಗರಿಗೆ ತೆರೆಯಲು ಸಿದ್ಧವಾಗಿದೆ.
ವಿಯೆಟ್ನಾಂನ ಉತ್ತರದ ಹೈಲ್ಯಾಂಡ್ಸ್ ಪಟ್ಟಣವಾದ ಮೊಕ್ ಚೌನಲ್ಲಿ 2,073.5 ಅಡಿ ಉದ್ದದ ಗಾಜಿನ ಸೇತುವೆಯನ್ನು ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಎಂದು ಕರೆಯಲಾಗುತ್ತದೆ. ಇದನ್ನು ಸ್ಥಳೀಯರು ಮತ್ತು ಪ್ರವಾಸಿಗರಿಗೆ ಶೀಘ್ರದಲ್ಲೇ ತೆರೆಯಲಾಗುತ್ತದೆ.
ಬ್ಯಾಚ್ ಲಾಂಗ್ ಹೆಸರಿನ ಸೇತುವೆಯು ವಿಯೆಟ್ನಾಂನಲ್ಲಿ ರಾಷ್ಟ್ರೀಯ ರಜಾದಿನವಾದ ಪುನರೇಕೀಕರಣ ದಿನದಂದು (ಏಪ್ರಿಲ್ 30) ಸಾರ್ವಜನಿಕರಿಗೆ ತೆರೆಯಲು ಉದ್ದೇಶಿಸಲಾಗಿದೆ. ಸೋನ್ ಲಾ ಪ್ರಾಂತ್ಯದ ಮೋಕ್ ಚೌ ದ್ವೀಪ ಪ್ರದೇಶದ ಅಧಿಕಾರಿಗಳು, ಗಾಜಿನ ಸೇತುವೆಯ ಅಧಿಕೃತ ಉದ್ದವನ್ನು ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಎಂದು ಗುರುತಿಸಲು ಗಿನ್ನಿಸ್ ವಿಶ್ವ ದಾಖಲೆಗೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಚೀನಾದ ಹುನಾನ್ ಪ್ರಾಂತ್ಯದ ಜಾಂಗ್ಜಿಯಾಜಿ ಗ್ರಾಂಡ್ ಕ್ಯಾನ್ಯನ್ ಮೇಲೆ 1,410.7 ಅಡಿ ಉದ್ದದ ಗಾಜಿನ ಸೇತುವೆಯು ಪ್ರಸ್ತುತ ಅತಿ ಉದ್ದದ ಗಾಜಿನ ಸೇತುವೆ ಎಂಬ ದಾಖಲೆಗೆ ಪಾತ್ರವಾಗಿದೆ.
ವಿಯೆಟ್ನಾಂನ ಗಾಜಿನ ಸೇತುವೆಯ ಫೋಟೋಗಳು ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಹನೋಯಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಸೇತುವೆಯು ನೆಲದಿಂದ ಸುಮಾರು 500 ಅಡಿಗಳಷ್ಟು ಎತ್ತರದಲ್ಲಿದೆ. ಪ್ರಭಾವಶಾಲಿ ವಾಸ್ತುಶಿಲ್ಪವು ಈಗಾಗಲೇ ನೆಟ್ಟಿಗರ ಮನಗೆದ್ದಿದೆ. ಈ ಸೇತುವೆಯು ಪ್ರಮುಖ ಫ್ರೆಂಚ್ ಕಂಪನಿಯಾದ ಸೇಂಟ್ ಗೊಬೈನ್ ಉತ್ಪಾದಿಸಿದ ಸೂಪರ್ ಟೆಂಪರ್ಡ್ ಗ್ಲಾಸ್‌ನಿಂದ ಮಾಡಲ್ಪಟ್ಟಿದೆ.
ಏಪ್ರಿಲ್ 30 ರಂದು ಸೇತುವೆಯು ಸಾರ್ವಜನಿಕರಿಗೆ ತೆರೆಯುವಾಗ ಒಂದೇ ಬಾರಿಗೆ 500 ಜನರಿಗೆ ಮಾತ್ರ ಅದರ ಮೇಲೆ ನಡೆಯಲು ಅನುಮತಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.