ಉತ್ತರ ಭಾರತದ ಬಹಳಷ್ಟು ಕಡೆ ದ್ವಿದಳ ಧಾನ್ಯಗಳನ್ನು ಬಳಸಿ ಮಾಡುವ ದಾಲ್ ಬಹು ಜನಪ್ರಿಯ ಅಡುಗೆಯಾಗಿದೆ. ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಇವೇ ಮೊದಲಾದವುಗಳನ್ನು ಬಳಸಿ ರುಚಿಕರ ದಾಲ್ ಮಾಡಲಾಗುತ್ತದೆ. ದಾಲ್ ಗಳನ್ನು ಇಷ್ಟ ಪಡುವ ಮಂದಿ ತೊಗರಿ ಬೇಳೆ ಬಳಸಿ ಮಾಡುವ ತರ್ಕಾದಾಲ್ ಮಾಡಿ ರುಚಿನೋಡಿ.
ಬೇಕಾಗುವ ಸಾಮಗ್ರಿಗಳು:
1 ಬಟ್ಟಲು ತೊಗರಿಬೇಳೆ, 6-8 ಕೆಂಪು ಮೆಣಸಿನಕಾಯಿಗಳು, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಈರುಳ್ಳಿ, 4-5 ಚಮಚ ಎಣ್ಣೆ, ಉಪ್ಪು.
ಮಾಡುವ ವಿಧಾನ:
ಬೇಳೆಯನ್ನು ಅರ್ಧ ತಾಸು ನೆನೆಸಿಟ್ಟು, ನಂತರ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ನಂತರ ಹೆಚ್ಚಿದ ಈರುಳ್ಳಿಯನ್ನು ಹಾಕಿ ಕಂದುಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಮೆಣಸಿನ ಕಾಯಿಯನ್ನು ಸೇರಿಸಿ. ಒಂದೆರಡು ನಿಮಿಷಗಳ ನಂತರ ಬೇಯಿಸಿಕೊಂಡ ಬೇಳೆಯನ್ನು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿ.
ಹುರಿದ ಮೆಣಸಿನಕಾಯಿಗಳು ಬೇಳೆಯ ಮೇಲೆ ಎಣ್ಣೆಯಲ್ಲಿ ತೇಲುತ್ತಿರಬೇಕು. ಮೇಲಿನಿಂದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಕರ ತರ್ಕಾದಾಲ್ ಸಿದ್ಧ. ಅನ್ನ ಇಲ್ಲವೇ ಚಪಾತಿಯೊಂದಿಗೆ ಸೇವಿಸಬಹುದು.