ಉತ್ತರ ಪ್ರದೇಶದ ಜೈಲುಗಳಲ್ಲಿ ಇನ್ನು ಮುಂದೆ ಮಹಾಮೃತ್ಯುಂಜಯ ಮಂತ್ರ ಮತ್ತು ಗಾಯತ್ರಿ ಮಂತ್ರ ಮೊಳಗಲಿದೆ. ಕೈದಿಗಳ ಮಾನಸಿಕ ನೆಮ್ಮದಿಗಾಗಿ ಯೋಗಿ ಸರ್ಕಾರ ಈ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಜೈಲುಗಳಲ್ಲಿ ಮಹಾಮೃತ್ಯುಂಜಯ ಮಂತ್ರ ಮತ್ತು ಗಾಯತ್ರಿ ಮಂತ್ರವನ್ನು ಪಠಿಸುವಂತೆ ಸಚಿವ ಧರಂವೀರ್ ಪ್ರಜಾಪತಿ ಆದೇಶಿಸಿದ್ದಾರೆ.
ಸಚಿವರ ಆದೇಶದ ಬೆನ್ನಲ್ಲೇ ಯುಪಿ ಜೈಲುಗಳಲ್ಲಿ ಮಂತ್ರ ಪಠಣ ಕೂಡ ಆರಂಭವಾಗಿದೆಯಂತೆ. ಇತ್ತೀಚೆಗಷ್ಟೆ ಸಚಿವರ ಜೊತೆ ಸಭೆ ನಡೆಸಿದ್ದ ಸಿಎಂ ಯೋಗಿ ಆದಿತ್ಯನಾಥ್, 100 ದಿನಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚಿಸಿದ್ದರು. ಅದರ ಬೆನ್ನಲ್ಲೇ ಜೈಲು ಸಚಿವರು ಮಂತ್ರ ಪಠಣಕ್ಕೆ ಆದೇಶ ನೀಡಿದ್ದಾರೆ.
ಸಚಿವರ ಜತೆಗಿನ ಸಭೆ ಬಳಿಕ ಮಾತನಾಡಿದ್ದ ಸಿಎಂ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶವನ್ನು ದೇಶದ ನಂಬರ್ ವನ್ ರಾಜ್ಯವನ್ನಾಗಿ ಮಾಡುವುದೇ ತಮ್ಮ ಗುರಿ ಎಂದಿದ್ದರು. ಆರ್ಥಿಕತೆಯ ಸುಧಾರಣೆಗೆ ಒತ್ತು ನೀಡುವುದಾಗಿ ತಿಳಿಸಿದ್ದರು. ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಸಮೃದ್ಧಿಯ ವ್ಯಾಪಕ ಸಾಧ್ಯತೆಗಳ ಕುರಿತು ಚರ್ಚಿಸಿದ ಸಿಎಂ ಯೋಗಿ, ಎಲ್ಲಾ ಇಲಾಖೆಗಳು 100 ದಿನಗಳು, 6 ತಿಂಗಳು ಮತ್ತು ವಾರ್ಷಿಕ ಗುರಿಯನ್ನು ನಿಗದಿಪಡಿಸುವ ವಿವರವಾದ ಮತ್ತು ಪ್ರಾಯೋಗಿಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕೆಂದು ಸೂಚಿಸಿದ್ದರು.