ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಉದ್ಯಮಿ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಅದೇ ರೀತಿ ಉತ್ತರ ಪ್ರದೇಶದ ಅತ್ಯಂತ ಸಿರಿವಂತ ವ್ಯಕ್ತಿ ಯಾರು ಗೊತ್ತಾ? ಸಾಮಾನ್ಯವಾಗಿ, ದೆಹಲಿ, ಮುಂಬೈ ಮತ್ತು ಗುರ್ಗಾಂವ್‌ನಂತಹ ವ್ಯಾಪಾರ ನಗರಗಳ ಜನರು ಹೆಚ್ಚಾಗಿ ಶ್ರೀಮಂತರ ಪಟ್ಟಿಯಲ್ಲಿ ಸೇರುತ್ತಾರೆ. ಮಿಲಿಯನೇರ್ ಉದ್ಯಮಿಗಳ ವಿಷಯದಲ್ಲಿ ಕಾನ್ಪುರ, ನೋಯ್ಡಾ ಮತ್ತು ಆಗ್ರಾದಂತಹ ನಗರಗಳು ಕಡಿಮೆಯೇನಿಲ್ಲ.
ಅದೇ ರೀತಿ ಯುಪಿಯ ಅತ್ಯಂತ ಶ್ರೀಮಂತ ವ್ಯಕ್ತಿಯ ಹೆಸರು ಮುರಳೀಧರ ಜ್ಞಾನಚಂದಾನಿ. ಅವರ ಒಟ್ಟಾರೆ ಆಸ್ತಿಯ ಮೌಲ್ಯ 12,000 ಕೋಟಿ ರೂಪಾಯಿ. ಉತ್ತರಪ್ರದೇಶದ ಶ್ರೀಮಂತರ ಪಟ್ಟಿಯಲ್ಲಿ ಮುರಳೀಧರ ಅವರ ಸಹೋದರ ಬಿಮಲ್ ಮೂರನೇ ಸ್ಥಾನದಲ್ಲಿದ್ದಾರೆ. 2022ರ ಹುರುನ್ ಶ್ರೀಮಂತರ ಪಟ್ಟಿಯ ಪ್ರಕಾರ, ಮುರಳೀಧರ್ ಜ್ಞಾನಚಂದಾನಿ ಯುಪಿಯ ಅತ್ಯಂತ ಸಿರಿವಂತ. ಅವರು ಘಡಿ ಡಿಟರ್ಜೆಂಟ್ ಪೌಡರ್ ತಯಾರಿಸುವ ಆರ್‌ಎಸ್‌ಪಿಎಲ್ ಗ್ರೂಪ್‌ನ ಮಾಲೀಕರಾಗಿದ್ದಾರೆ.
ಮುರಳೀಧರ ಅವರ ಸಹೋದರನ ಆಸ್ತಿ 8000 ಕೋಟಿ ರೂಪಾಯಿ. ಅವರು ಕಾನ್ಪುರದ ನಿವಾಸಿಯಾಗಿದ್ದು, ಅವರ ವ್ಯವಹಾರವೂ ಕಾನ್ಪುರದಲ್ಲಿದೆ. ಮುರಳೀಧರ ಅವರ ತಂದೆ ದಯಾಳ್‌ದಾಸ್ ಜ್ಞಾನಚಂದಾನಿ, ಗ್ಲಿಸರಿನ್ ಬಳಸಿ ಎಣ್ಣೆ ಸಾಬೂನು ತಯಾರಿಸುತ್ತಿದ್ದರು. ಬಳಿಕ ಕಡಿಮೆ ಬೆಲೆಗೆ ಘಡಿ ಹೆಸರಿನ ಡಿಟರ್ಜೆಂಟ್ ಅನ್ನು ರೋಹಿತ್ ಸರ್ಫ್ಯಾಕ್ಟಂಟ್ಸ್ ಪರಿಚಯಿಸಿತು. ಇದು ಭಾರತದ ಎರಡನೇ ಅತಿ ದೊಡ್ಡ ಡಿಟರ್ಜೆಂಟ್ ಬ್ರಾಂಡ್ ಎನಿಸಿಕೊಂಡಿದೆ. ಬಿಮಲ್ ಅವರ ಮಗ ಕಂಪನಿಯ ಮಾರ್ಕೆಟಿಂಗ್ ವಿಭಾಗವನ್ನು ನಿರ್ವಹಿಸುತ್ತಾರೆ.
ಮುರಳೀಧರ್ ಅವರ ಮಕ್ಕಳಾದ ಮನೋಜ್ ಮತ್ತು ರಾಹುಲ್ ಕೂಡ ಈ ಸಂಸ್ಥೆಯ ಭಾಗವಾಗಿದ್ದಾರೆ. ಘಡಿ ಡಿಟರ್ಜೆಂಟ್ ಅನ್ನು ವಿದೇಶದಲ್ಲಿಯೂ ಮಾರಾಟ ಮಾಡಲಾಗುತ್ತದೆ. ಘಡಿ ಡಿಟರ್ಜೆಂಟ್ ಹೊರತಾಗಿ ಅವರು ಪ್ರಸಿದ್ಧ ಶೂ ಕಂಪನಿ ರೆಡ್ ಚೀಫ್‌ನ ಮಾಲೀಕರೂ ಹೌದು. 1980ರ ದಶಕದ ಅಂತ್ಯದಲ್ಲಿ ಸಹೋದರರು ಬ್ರ್ಯಾಂಡ್ ಅನ್ನು ಪ್ರಾರಂಭಿಸಿದಾಗ, ಸರ್ಫ್ ಮತ್ತು ನಿರ್ಮಾ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದ್ದವು.
ಈ ಕುಟುಂಬ ಕಾನ್ಪುರದಲ್ಲಿ ಚಾರಿಟಬಲ್ ಆಸ್ಪತ್ರೆಯನ್ನೂ ಸ್ಥಾಪಿಸಿದೆ. ಆಸ್ಪತ್ರೆಗೆ ಅವರ ಪೋಷಕರ ಹೆಸರಿಡಲಾಗಿದೆ. ಮುರಳೀಧರ್ ಅತ್ಯಂತ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ 149ನೇ ಸ್ಥಾನದಲ್ಲಿದ್ದಾರೆ. 1995 ರಲ್ಲಿ ಮನೋಜ್ ಜ್ಞಾನಚಂದಾನಿ ಆರಂಭಿಸಿದ ಲಯನ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಕೂಡ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ.
ಈ ಕಂಪನಿಯಲ್ಲೇ ರೆಡ್ ಚೀಫ್ ಶೂಗಳನ್ನು ತಯಾರಿಸಲಾಗುತ್ತದೆ. ಇಷ್ಟೆಲ್ಲಾ ಆಸ್ತಿಪಾಸ್ತಿ ಇದ್ದರೂ ಇಡೀ ಕುಟುಂಬವು ಸರಳ ಬದುಕನ್ನು ನಡೆಸುತ್ತಿದೆ; ಅವರಲ್ಲಿ ಯಾರೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿಲ್ಲ.