ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರ ಹೇಳಿಕೆಯೊಂದು ರಾಜಕೀಯ ಅಂಗಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 5 ರಾಜ್ಯಗಳಲ್ಲಿ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಕಾರ್ಯತಂತ್ರಗಳು ಮುನ್ನೆಲೆಗೆ ಬರುತ್ತಿವೆ. ಹೀಗಾಗಿ ಆರೋಪ – ಪ್ರತ್ಯಾರೋಪಗಳು ಕೂಡ ಕೆಳ ಮಟ್ಟಕ್ಕೆ ತಲುಪುತ್ತಿವೆ. ಇದರ ಮಧ್ಯೆಯೇ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಿಂದ ಸಿಎಂ ಅಭ್ಯರ್ಥಿ ವಿಷಯವಾಗಿ ಹೊಸ ಚರ್ಚೆಯೊಂದು ಆರಂಭವಾಗಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿ ಯೋಗಿ ಆದಿತ್ಯನಾಥ್ ಹಾಗೂ ಸಮಾಜವಾದಿ ಪಕ್ಷದಿಂದ ಅಖಿಲೇಶ್ ಯಾದವ್ ಹೆಸರು ಘೋಷಣೆಯಾಗಿವೆ. ಈ ಮಧ್ಯೆ ಪ್ರಿಯಾಂಕಾ ವಾದ್ರಾ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಕುರಿತು ಮಾತನಾಡಿದ್ದಾರೆ.
ಈ ಕುರಿತು ಸ್ವತಃ ಅವರೇ ಪ್ರಶ್ನೆಯನ್ನು ಕೇಳಿದ್ದಾರೆ. ನನ್ನ ಮುಖವೇ ನಿಮಗೆ ಕಾಣುತ್ತಿಲ್ಲವೇ ? ಎಂದು ಸಿಎಂ ಅಭ್ಯರ್ಥಿ ವಿಷಯದಲ್ಲಿ ಅವರು ಮಾತನಾಡಿದ್ದಾರೆ. ಆದರೆ, ಕಾಂಗ್ರೆಸ್ ನಿಂದ ಮಾತ್ರ ಇದುವರೆಗೂ ಯಾವುದೇ ಹೆಸರು ಅಂತಿಮವಾಗಿಲ್ಲ.
ಪ್ರಿಯಾಂಕಾ ಅವರ ಈ ಮಾತು ಹೊಸ ಸಂಚಲನ ಸೃಷ್ಟಿಸಿದ್ದಂತೂ ಸತ್ಯ. ಪ್ರಿಯಾಂಕಾ ಉತ್ತರ ಪ್ರದೇಶ ಸಿಎಂ ಆಗಲು ವಿಧಾನಸಭೆ ಸ್ಪರ್ಧೆ ಮಾಡಬೇಕೆಂದಿಲ್ಲ. ಪಕ್ಷ ಅಧಿಕಾರದ ಸನಿಹಕ್ಕೆ ಬಂದರೆ, ಅವರು ಸಿಎಂ ಅಭ್ಯರ್ಥಿ ಎಂದು ಘೋಷಣೆಯಾಗುವುದರಲ್ಲಿ ಸಂಶಯವೇ ಇಲ್ಲ ಎಂಬ ಚರ್ಚೆಗಳು ಸದ್ಯ ಉತ್ತರ ಪ್ರದೇಶದಲ್ಲಿ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.