ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂಬ ಕೂಗು ಬಹುಕಾಲದಿಂದಲೂ ಕೇಳಿ ಬರುತ್ತಿದ್ದು, ಇತ್ತೀಚೆಗೆ ರೋಗಿಯೊಬ್ಬರನ್ನು ಅಂಬುಲೆನ್ಸ್ ನಲ್ಲಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಂಭವಿಸಿದ ಅಪಘಾತದ ಬಳಿಕ ಈ ಕೂಗು ಮತ್ತಷ್ಟು ಜೋರಾಗಿತ್ತು.
ಹೀಗಾಗಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಯಾನ ಆರಂಭವಾಗಿದ್ದು, ಇದಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿತ್ತು. ಹೀಗಾಗಿ ಈ ಬಾರಿ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಖಚಿತ ಎಂಬ ಭಾವನೆ ಬಂದಿತ್ತು. ಆದರೆ ಇದೀಗ ಉತ್ತರ ಕನ್ನಡ ಜಿಲ್ಲೆ ಜನತೆಗೆ ಮತ್ತೆ ನಿರಾಸೆ ಆವರಿಸಿದೆ.
ವಿಧಾನಸಭೆಯಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟಿಲ್ಲ. ಹೀಗಾಗಿ ಮತ್ತೊಮ್ಮೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಒಂದೊಮ್ಮೆ ಅನುಮತಿ ದೊರೆತರೆ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.