ಉತ್ತರಾಖಂಡ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಉತ್ತರಾಖಂಡ ಪ್ರವಾಸದಲ್ಲಿದ್ದಾರೆ. ಇವರು ಮೊತ್ತ ಮೊದಲ ಸಲ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಾಬಾ ಕೇದಾರನಾಥದ ಪುಣ್ಯಭೂಮಿಯನ್ನು ತಲುಪಿದ ಪ್ರಧಾನಿಯವರು ಹಿಮಾಚಲ ಪ್ರದೇಶದ ಸ್ಥಳೀಯ ವಿಶೇಷ ಉಡುಗೆಯನ್ನು ಧರಿಸಿ ಕೇದಾರನಾಥನ ದರ್ಶನಕ್ಕೆ ಹೋದರು.
ಈ ಉಡುಪಿಗೆ ಚೋಳ ಡೋರಾ ಎಂದು ಕರೆಯಲಾಗುತ್ತದೆ. ಹಿಮಾಚಲ ಪ್ರದೇಶದ ಕೈಮಗ್ಗ ಉದ್ಯಮದಲ್ಲಿ ಇದನ್ನು ತಯಾರು ಮಾಡಲಾಗಿದೆ. ಅಷ್ಟಕ್ಕೂ ಪ್ರಧಾನಿ ಈ ದಿರಿಸು ಧರಿಸಲು ಕಾರಣ ಏನೆಂದರೆ, ಹಿಂದೆ ಮೋದಿಯವರು ಹಿಮಾಚಲದ ಚಂಬಾ ಪ್ರವಾಸಕ್ಕೆ ಹೋದಾಗ ಮಹಿಳೆಯೊಬ್ಬರು ತಮ್ಮ ಕೈಯಿಂದ ಈ ಉಡುಪನ್ನು ಉಡುಗೊರೆಯಾಗಿ ನೀಡಿದ್ದರು. ಅದನ್ನು ಮುಂದಿನ ಬಾರಿ ತಾವು ಧರಿಸಿ ಬರುವುದಾಗಿ ಮೋದಿ ವಾಗ್ದಾನ ಮಾಡಿದ್ದರು. ಅದರಂತೆ ಈಗ ನಡೆದುಕೊಂಡಿದ್ದಾರೆ.
ಚಂಬಾ ಪ್ರವಾಸದ ವೇಳೆ ಉಡುಪನ್ನು ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಗೆ ಚಳಿ ಪ್ರದೇಶಕ್ಕೆ ಹೋದಾಗಲೆಲ್ಲಾ ಅದನ್ನು ಧರಿಸುವುದಾಗಿ ಭರವಸೆ ನೀಡಿದ್ದರು. ಕೇದಾರನಾಥ ದೇಗುಲವನ್ನು ತಲುಪಿದ ನಂತರ, ಪ್ರಧಾನಿ ಮೋದಿ ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ.
ಕೇದಾರನಾಥದಿಂದ ಮೋದಿ ಬದರಿನಾಥಕ್ಕೆ ಭೇಟಿ ನೀಡಲಿದ್ದು ಈ ವೇಳೆ ಉತ್ತರಾಖಂಡದಲ್ಲಿ 3400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.