ಆರೋಗ್ಯವೇ ಭಾಗ್ಯ….ನಿಜ….ಆರೋಗ್ಯ ನೆಟ್ಟಗಿದ್ರೆ ಸಾಕು ಏನು ಬೇಕಾದ್ರೂ ಸಾಧಿಸಬಹುದು. ದೈನಂದಿನ ಯಾಂತ್ರಿಕ ಬದುಕಿನ ನಡುವೆಯೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳೋದು ಸುಲಭದ ಮಾತಲ್ಲ. ಬಹಳಷ್ಟು ಮಂದಿಗೆ ಸ್ವಿಮ್ಮಿಂಗ್ ಅವರ ಉತ್ತಮ ಆರೋಗ್ಯದ ಗುಟ್ಟು.
ಶರೀರದ ಫಿಟ್ ನೆಸ್ ಕಾಯ್ದುಕೊಳ್ಳಬೇಕಂದ್ರೆ ದಿನನಿತ್ಯ ಒಂದಿಷ್ಟು ಕಸರತ್ತುಗಳು, ವ್ಯಾಯಾಮ ಅತ್ಯಗತ್ಯ. ಆದ್ರೆ ಅದೆಷ್ಟು ಬೆವರಿಳಿಸಿ ಮೈ ದಣಿಸಿಕೊಂಡರೂ ಪೂರ್ತಿ ಶರೀರಕ್ಕೆ ಸಂಪೂರ್ಣ ವ್ಯಾಯಾಮ ಸಿಕ್ಕೋದು ದೂರದ ಮಾತೇ ಸರಿ. ಆದ್ರೆ ಇಡೀ ಶರೀರಕ್ಕೆ ಸ್ವಿಮ್ಮಿಂಗ್ ನಿಂದ ರಿಲ್ಯಾಕ್ಸ್ ಸಿಗೋದಕ್ಕೆ ಸಾಧ್ಯ. ಪ್ರತೀ ಅಂಗಾಗಗಳಿಗೆ ಧಾರಾಳ ವ್ಯಾಯಾಮ ನೀಡಬಲ್ಲ ಈಜು, ಅದೆಷ್ಟೋ ಜನರ ಫಿಟ್ ನೆಸ್ ಗುಟ್ಟು.
ದಿನಕ್ಕೆ ಒಂದು ತಾಸು ಈಜುವುದರಿಂದ ನಮಗೆ ಬಹಳಾನೇ ಅನುಕೂಲಗಳಿವೆ. ದೀರ್ಘಾಯುಷ್ಯ ಬೇಕೇ, ಔಷಧಿಗಳಿಂದ, ಮಾತ್ರೆಗಳಿಂದ ದೂರ ಉಳೀಬೇಕೇ… ಹಾಗಾದ್ರೆ ಸ್ವಿಮ್ಮಿಂಗ್ ಶುರು ಮಾಡಿ ಅಂತ ವೈದ್ಯರು ಸಲಹೆ ನೀಡ್ತಿದ್ದಾರೆ. ಬೆನ್ನು ನೋವು, ಕೀಲು ನೋವು, ರಕ್ತದೊತ್ತಡ ಮಾತ್ರವಲ್ಲದೇ ಬಹುತೇಕ ಕಾಯಿಲೆಗಳಿಗೆ ಈಜುವುದು ಉತ್ತಮ ವ್ಯಾಯಾಮ.
ಮಕ್ಕಳ ಆರೋಗ್ಯಕ್ಕೆ ಅಗತ್ಯ ʼವ್ಯಾಯಾಮʼ
ನಿಯಮಿತವಾಗಿ ಸ್ವಿಮ್ಮಿಂಗ್ ಮಾಡುವುದರಿಂದ ಶರೀರಕ್ಕೆ ಹೆಚ್ಚು ಆಮ್ಲಜನಕ ಪೂರೈಕೆಯಾಗಿ ಶ್ವಾಸಕೋಶದ ಕ್ರಿಯೆ ಸರಳವಾಗಿ ಆಗುತ್ತದೆ. ಇನ್ನು ದೇಹದ ತೂಕ ಇಳಿಸಲು ಬೇರೆ ವ್ಯಾಯಾಮಗಳಿಗಿಂತ ಸ್ವಿಮ್ಮಿಂಗ್ ಹೆಚ್ಚು ಸೂಕ್ತ. ಈಜುವುದಕ್ಕೆ ಹೆಚ್ಚು ಪರಿಶ್ರಮ, ಶಾರೀರಿಕ ಬಲ ಅಗತ್ಯ. ಹೀಗಾಗಿ ಇಲ್ಲಿ ದೇಹದ ಪ್ರತಿಯೊಂದು ಕೀಲುಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ. ಕೀಲು ನೋವು, ಗಂಟು ನೋವಿನಿಂದ ಬಳಲುತ್ತಿರುವವರಿಗೆ ಈಜು ಉತ್ತಮ ಚಿಕಿತ್ಸೆ.
ಸ್ವಿಮ್ಮಿಂಗ್ ನಿಂದ ಶರೀರ ದಿನವಿಡೀ ಚಟುವಟಿಕೆಯಿಂದಿರುತ್ತದೆ. ಇನ್ನು ಮೊದಲ ನಾಲ್ಕು ತಿಂಗಳವರೆಗಿನ ಗರ್ಭಿಣಿಯರು ಈಜುವುದರಿಂದ ಪ್ರಸವ ಸುಲಭವಾಗಿ ಆಗುತ್ತದೆ ಎಂಬುದು ವೈದ್ಯರ ಅಭಿಮತ. ಹೀಗೆ ಸ್ವಿಮ್ಮಿಂಗ್ ಆರೋಗ್ಯ ವೃದ್ಧಿಗೆ ಪೂರಕವಾಗಿದೆ. ಒಟ್ಟಿನಲ್ಲಿ ಈಜುವುದರಿಂದ ದೇಹದೊಂದಿಗೆ ಮನಸ್ಸು ಕೂಡ ಹಗುರವಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.