
ಪಾಯಸ, ಲಾಡು, ಹಲ್ವಾ ಮೊದಲಾದ ಸಿಹಿತಿಂಡಿಗಳನ್ನು ತಯಾರಿಸುವಾಗ ಮರೆಯದೆ ಬಳಸುವ ವಸ್ತುಗಳಲ್ಲಿ ಒಣದ್ರಾಕ್ಷಿಯೂ ಒಂದು. ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ.
ನಿರಂತರವಾಗಿ ಇದನ್ನು ಸೇವಿಸುವುದರಿಂದ ಮಲಬದ್ಧತೆ, ಹೊಟ್ಟೆ ಉಬ್ಬರ, ರಕ್ತಹೀನತೆ ಸಮಸ್ಯೆಗಳು ದೂರವಾಗುತ್ತವೆ. ಇದರಲ್ಲಿರುವ ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಗಳು ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸುತ್ತವೆ. ಮುಖದಲ್ಲಿ ಮೂಡಿರುವ ಮೊಡವೆಯನ್ನು ಹಾಗೂ ಅದರ ಕಲೆಗಳನ್ನು ದೂರಮಾಡುವ ಶಕ್ತಿಯೂ ಇದಕ್ಕಿದೆ.
ಪೌಷ್ಟಿಕಾಂಶದ ಕೊರತೆಯಿಂದ ಕೂದಲು ಬೆಳ್ಳಗಾಗಿದ್ದರೆ, ನೆರೆದಿದ್ದರೆ, ಉದುರುತ್ತಿದ್ದರೆ ಒಣ ದ್ರಾಕ್ಷಿ ಸೇವನೆಯಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುವ ಇದು ಅಧಿಕ ರಕ್ತದ ಒತ್ತಡದ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಇದರಲ್ಲಿ ಹೆಚ್ಚಿರುವ ಪೊಟ್ಯಾಶಿಯಂ ಅಂಶ ದೇಹದ ಸೋಡಿಯಂ ಪ್ರಮಾಣವನ್ನು ತಗ್ಗಿಸುತ್ತದೆ.
ಅದರಲ್ಲೂ ವಿಶೇಷವಾಗಿ ಒಣ ದ್ರಾಕ್ಷಿ ಹಣ್ಣುಗಳನ್ನು ಮೊಸರಿನೊಂದಿಗೆ ಸೇವಿಸುವುದರಿಂದ ಹೆಚ್ಚಿನ ಲಾಭಗಳನ್ನು ಪಡೆಯಬಹುದು. ಹಲ್ಲು ಹುಳುಕಾಗುವುದನ್ನು ತಪ್ಪಿಸುವ ಇದು ಹಲ್ಲುಗಳನ್ನು ಬಲಪಡಿಸುತ್ತದೆ. ವಸಡಿನ ಆರೋಗ್ಯವನ್ನು ಸುಧಾರಿಸುತ್ತದೆ. ಜಗಿದು ತಿನ್ನುವುದರಿಂದ ಎನಾಮಲ್ ಗಟ್ಟಿಯಾಗುತ್ತದೆ. ಅನೀಮಿಯಾ ಸಮಸ್ಯೆಯಿಂದ ಮುಕ್ತಿ ನೀಡಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.