ಇತ್ತೀಚಿನ ದಿನಗಳಲ್ಲಿ ಹಣ್ಣು ಮತ್ತು ತರಕಾರಿಗಳು ಹೆಚ್ಚು ದಿನ ತಾಜಾವಾಗಿರಲೆಂದು ಕ್ರಿಮಿನಾಶಕಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇವುಗಳನ್ನು ಮಾರುಕಟ್ಟೆಯಿಂದ ತಂದು ನೇರವಾಗಿ ಅಡುಗೆಗೆ ಹಾಗೂ ತಿನ್ನುವುದಕ್ಕೆ ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಹಾಗಾಗಿ ಹೊರಗಡೆಯಿಂದ ತಂದ ಹಣ್ಣು – ತರಕಾರಿಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿದ ನಂತರವಷ್ಟೇ ಬಳಸಬೇಕು. ಹಣ್ಣು ತರಕಾರಿಗಳನ್ನು ಕೇವಲ ನೀರಿನಿಂದ ತೊಳೆದರೆ ಸಾಲದು. ಅವುಗಳಿಗೆ ಸಿಂಪಡಿಸಿರುವ ಕ್ರಿಮಿನಾಶಕಗಳು ಸಂಪೂರ್ಣವಾಗಿ ಹೋಗಬೇಕೆಂದರೆ ಕೆಲ ವಿಧಾನಗಳನ್ನು ಅನುಸರಿಸಬೇಕು.
* ಹಣ್ಣು ಮತ್ತು ತರಕಾರಿಗಳಲ್ಲಿರುವ ಕ್ರಿಮಿನಾಶಕಗಳನ್ನು ಸಂಪೂರ್ಣವಾಗಿ ತೆಗೆಯುವ ಅಂಶ ವಿನೆಗರ್ ಗೆ ಇದೆ. ಒಂದು ದೊಡ್ಡ ಟಬ್ ನಲ್ಲಿ ನೀರು ತುಂಬಿ ಅದಕ್ಕೆ ವಿನೆಗರ್ ಹಾಕಿ. ಅದರಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಹಾಕಿ ಸ್ವಲ್ಪ ಸಮಯ ಬಿಡಿ. ನಂತರ ಶುಭ್ರವಾದ ನೀರಿನಿಂದ ಸ್ವಚ್ಛಗೊಳಿಸಿ ನಂತರ ಉಪಯೋಗಿಸಿ.
* ಹಣ್ಣು ಮತ್ತು ತರಕಾರಿಗಳಲ್ಲಿನ ರಾಸಾಯನಿಕ ಅಂಶಗಳನ್ನು ಹೋಗಲಾಡಿಸಲು ಬೇಕಿಂಗ್ ಸೋಡಾ ಸರಿಯಾದ ಆಯ್ಕೆ. ದೊಡ್ಡ ಟಬ್ ಅಥವಾ ಪಾತ್ರೆಗೆ ನೀರು ತುಂಬಿಸಿ ಅದಕ್ಕೆ ಬೇಕಿಂಗ್ ಸೋಡಾ ಹಾಕಿ. ಅದರಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಹಾಕಿ 15 ರಿಂದ 20 ನಿಮಿಷ ಬಿಡಿ. ನಂತರ ಅವುಗಳನ್ನು ಸ್ವಚ್ಛ ನೀರಿನಿಂದ ತೊಳೆದು ಬಳಸಬಹುದು.
* ಇದೇ ರೀತಿ ಹಣ್ಣು – ತರಕಾರಿಗಳನ್ನು ತೊಳೆಯಲು ಅರಿಶಿನ ಮತ್ತು ಉಪ್ಪು ಬಳಸಬಹುದು. ಯಾಕಂದ್ರೆ ಇವುಗಳಲ್ಲಿ ಕ್ರಿಮಿನಾಶಕಗಳನ್ನು ಕೊಲ್ಲುವ ಅಂಶ ಇವೆ.