ಉತ್ತಮ ಆರೋಗ್ಯಕ್ಕೆ ವಾಕಿಂಗ್, ಜಾಗಿಂಗ್, ವ್ಯಾಯಾಮ ಬಹಳ ಮುಖ್ಯ ಎಂದು ಹೇಳಿರುವುದನ್ನು ಕೇಳಿರುತ್ತೀರಿ. ಆದರೆ ಅದಕ್ಕೆ ಎಷ್ಟು ಸಮಯ ಮೀಸಲಿಡಬೇಕು ಎಂಬುದನ್ನು ಸ್ಪಷ್ಟವಾಗಿ ಯಾರೂ ಹೇಳಿರುವುದಿಲ್ಲ.
ಉತ್ತಮ ಆರೋಗ್ಯ ಹೊಂದಲು ನಿತ್ಯ ಕನಿಷ್ಟ 50 ನಿಮಿಷದ ವ್ಯಾಯಾಮ ಅಥವಾ ಜಾಗಿಂಗ್ ಅಗತ್ಯ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಜಿಮ್ ಗೆ ಹೋಗದೆಯೂ ಮನೆಯ ಆಸುಪಾಸಿನಲ್ಲೇ ಉತ್ತಮ ರೀತಿಯಲ್ಲಿ ಜಾಗಿಂಗ್ ಮಾಡುವ ಮೂಲಕ ನಿಮ್ಮ ದೇಹವನ್ನು ದಂಡಿಸಬಹುದು.
ಜಿಮ್ ಗೆ ಪಾರ್ಕ್ ಗೆ ಹೋಗುವಷ್ಟು ಸಮಯ ಇಲ್ಲ ಎಂದಾದರೆ ಮನೆಯ ಟೆರೇಸ್ ನ ಮೆಟ್ಟಿಲುಗಳನ್ನು ಹತ್ತಾರು ಬಾರಿ ಹತ್ತಿ ಇಳಿಯಿರಿ. ಕಚೇರಿಯಲ್ಲಿ ಅಥವಾ ಕಾಲೇಜಿನಲ್ಲಿ ಸುಮ್ಮನಿರುವ ಅವಧಿ ಸಿಕ್ಕಾಗ ಎರಡು ಬಾರಿ ಮೆಟ್ಟಿಲು ಹತ್ತಿ ಇಳಿಯಿರಿ. ಇದು ನಿಮ್ಮ ಕಾಲಿನ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ನೀಡುತ್ತದೆ.
ಮನೆಯೊಳಗೆ ಸ್ಕಿಪ್ಪಿಂಗ್ ಮಾಡಿ. ನಿತ್ಯ ಹದಿನೈದು ನಿಮಿಷ ಇದಕ್ಕೆ ಮೀಸಲಿಟ್ಟರೆ ಸಾಕು. ಸಣ್ಣ ವಿರಾಮದ ಬಳಿಕ ಮತ್ತೆ ಸ್ಕಿಪ್ಪಿಂಗ್ ಪುನರಾವರ್ತಿಸುತ್ತಿರಿ. 10 ನಿಮಿಷದ ಸ್ಕಿಪ್ಪಿಂಗ್ 45 ನಿಮಿಷದ ವಾಕಿಂಗ್ ಗೆ ಸಮಾನ ಎಂಬುದನ್ನು ನೆನಪಿಡಿ. ಹೃದಯ ಬಡಿತವನ್ನು ನಿಯಂತ್ರಿಸುವ ಈ ವ್ಯಾಯಾಮವನ್ನು ಎಲ್ಲರೂ ಮಾಡಬಹುದು.