ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪುರಾತನ ನಾಗಚಂದೇಶ್ವರ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ದೇವಸ್ಥಾನದ ದ್ವಾರಗಳನ್ನು ಸೋಮವಾರ ಮತ್ತು ಮಂಗಳವಾರದ ಮಧ್ಯರಾತ್ರಿ ತೆರೆಯಲಾಗಿತ್ತು. ಕೇವಲ 20 ಗಂಟೆಗಳ ಅವಧಿಯಲ್ಲಿ ಸುಮಾರು 3.5 ಲಕ್ಷ ಭಕ್ತರು ದೇವರ ದರ್ಶನ ಪಡೆದಿದ್ದಾರೆ.
ನಾಗಪಂಚಮಿ ನಿಮಿತ್ತ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಮಧ್ಯರಾತ್ರಿ 12 ಗಂಟೆಗೆ ನಾಗಚಂದ್ರೇಶ್ವರ ದೇವಸ್ಥಾನದ ಬಾಗಿಲು ತೆರೆಯಲಾಯ್ತು. ಮೊದಲ ಪೂಜೆಯನ್ನು ಶ್ರೀ ಪಂಚಾಯಿತಿ ಮಹಾನಿರ್ವಾಣಿ ಅಖಾಡದ ಮಹಾಂತ್ ವಿನೀತ್ ಗಿರಿ ಮಹಾರಾಜ್ ನೆರವೇರಿಸಿದರು.
ಆರ್‌ಎಸ್‌ಎಸ್‌ನ ಹಿರಿಯ ನಾಯಕರಾದ ಭಯ್ಯಾಜಿ ಜೋಶಿ, ದೀಪಕ್ ವಿಸ್ಪುಟೆ, ಮಖನ್ ಸಿಂಗ್ ಚೌಹಾಣ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಹಿತಾನಂದ ಶರ್ಮಾ, ಸಂಪುಟ ಸಚಿವರಾದ ಕಮಲ್ ಪಟೇಲ್, ಮೋಹನ್ ಯಾದವ್ ಸೇರಿದಂತೆ ಅನೇಕ ಗಣ್ಯರು ದೇವಾಲಯದಲ್ಲಿ ಹಾಜರಿದ್ದರು.
ಪೂಜೆಯ ನಂತರ ಮಹಾಕಲ್ ವಿಶ್ರಮಧಾಮ ಮತ್ತು ನಾಗಚಂದ್ರೇಶ್ವರ ದೇವಸ್ಥಾನದ ನಡುವೆ ನಿರ್ಮಿಸಲಾದ ಹೊಸ ಕಬ್ಬಿಣದ ಸೇತುವೆಯ ಮೂಲಕ ಸಾಮಾನ್ಯ ಭಕ್ತರಿಗೆ ದರ್ಶನಕ್ಕೆ ಪ್ರವೇಶ ನೀಡಲಾಯಿತು. ಮಧ್ಯಾಹ್ನ 12 ಗಂಟೆಗೆ ಸಾಂಪ್ರದಾಯಿಕ ಅಧಿಕೃತ ಪೂಜೆ ನಡೆಯಿತು. ಶ್ರೀ ಮಹಾಕಾಳೇಶ್ವರ ದೇವಾಲಯದ ಶಿಖರವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಭಗವಾನ್ ಮಹಾಕಾಲ್ ಕೆಳಭಾಗದಲ್ಲಿದ್ದು, ಎರಡನೇ ವಿಭಾಗದಲ್ಲಿ ಓಂಕಾರೇಶ್ವರ ಮತ್ತು ಮೂರನೇ ವಿಭಾಗದಲ್ಲಿ ನಾಗಚಂದ್ರೇಶ್ವರನ ದೇವಾಲಯವಿದೆ. ನಾಗಚಂದ್ರೇಶ್ವರ ದೇವಾಲಯವು ವಿಷ್ಣುವಿನ ಬದಲಾಗಿ ಶಿವ, ಪಾರ್ವತಿ ದೇವಿ ಮತ್ತು ಗಣೇಶ ಏಳು ಮುಖದ ಹಾವಿನ ಹಾಸಿಗೆಯ ಮೇಲೆ ಕುಳಿತಿರುವಂತೆ ಕೆತ್ತಲಾಗಿದೆ. ಈ ರೀತಿ ಇರುವ ವಿಶ್ವದ ಏಕೈಕ ದೇವಾಲಯ ಇದಾಗಿದೆ. ಈ ಪ್ರತಿಮೆಯನ್ನು ನೇಪಾಳದಿಂದ ಇಲ್ಲಿಗೆ ತರಲಾಗಿದೆಯಂತೆ. ಉಜ್ಜಯಿನಿ ಬಿಟ್ಟರೆ ಜಗತ್ತಿನಲ್ಲಿ ಎಲ್ಲಿಯೂ ಇಂತಹ ಪ್ರತಿಮೆ ಇಲ್ಲ.