ಶುಕ್ರವಾರದಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದು, ಈ ವಿಷಯವನ್ನು ಅವರು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಕಾಂಗ್ರೆಸ್ ಮೇಲೆ ನನಗೆ ಪ್ರೀತಿ ಇದೆ. ಹಾಗಾಗಿ ಆ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿರುವುದಾಗಿ ತಮ್ಮನ್ನು ಸಮರ್ಥಿಸಿಕೊಂಡಿದ್ದರು.
ಆ ಬಳಿಕ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ತಮ್ಮ ಪಕ್ಷದ ಶಾಸಕರ ವಿರುದ್ಧ ಕಿಡಿಕಾರಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಮಾನ – ಮರ್ಯಾದೆ ಇದ್ದರೆ ಶ್ರೀನಿವಾಸ್ ಶ್ರೀನಿವಾಸ್ ಗೌಡ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಪಕ್ಷದ ಚಿನ್ನೆ ಮೇಲೆ ಗೆದ್ದು ಅವರು ಕ್ಷೇತ್ರದ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದ್ದರು.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಶ್ರೀನಿವಾಸ್ ಗೌಡ, ಪ್ರಜ್ವಲ್ ರೇವಣ್ಣ ಏಳು ತಿಂಗಳ ಹಿಂದೆಯೇ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದಾಗಿ ಹೇಳಿದ್ದಾರೆ. ಇಷ್ಟು ಮಾಡಿದ ಮೇಲೆ ನನ್ನ ಮತದಾನದ ಕುರಿತು ಕೇಳುವುದಕ್ಕೆ ಅವರ್ಯಾರು ಎಂದು ಪ್ರಶ್ನಿಸಿದ್ದಾರೆ.