ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ವಿವಾಹ ಸಂದರ್ಭದಲ್ಲಿ ದುಂದುವೆಚ್ಚ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದೆಂಬ ಕಾರಣಕ್ಕೆ ರಾಜ್ಯ ಸರ್ಕಾರ ‘ಸಪ್ತಪದಿ’ ಯೋಜನೆಯನ್ನು ಜಾರಿಗೊಳಿಸಿದ್ದು, ಆದರೆ ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಈ ಯೋಜನೆ ಸ್ಥಗಿತಗೊಂಡಿತ್ತು.
ಇದೀಗ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕಾರ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿದ್ದು, ಈ ಹಿನ್ನೆಲೆಯಲ್ಲಿ ಸಪ್ತಪದಿ ಯೋಜನೆಯನ್ನು ಮತ್ತೆ ಜಾರಿಗೊಳಿಸಲು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ನಿರ್ಧರಿಸಿದ್ದಾರೆ. ಹೀಗಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಯ್ದ ದೇವಸ್ಥಾನಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿಸಲು ಆದೇಶಿಸಲಾಗಿದೆ.
ಆಯ್ದ ಎ ಗ್ರೇಡ್ ದೇವಾಲಯಗಳಲ್ಲಿ ಏಪ್ರಿಲ್ 28, ಮೇ 11 ಮತ್ತು ಮೇ 25ರಂದು ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ವಧು ಮತ್ತು ವರನಿಗೆ ಉಡುಗೆ, ಬಂಗಾರದ ಉಡುಗೊರೆ ನೀಡುವುದರ ಜೊತೆಗೆ ವಧು ಮತ್ತು ವರನ ಸಂಬಂಧಿಕರಿಗೆ ದೇವಾಲಯದಲ್ಲಿ ಊಟೋಪಚಾರದ ವ್ಯವಸ್ಥೆಯನ್ನು ಆಡಳಿತ ಮಂಡಳಿಗಳು ಕಲ್ಪಿಸಲಿವೆ.