1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಸಮಾಧಿಗೆ ಅಲಂಕಾರ ಮಾಡಿರೋದು ಹೊಸ ವಿವಾದಕ್ಕೆ ಕಾರಣವಾಗಿದೆ.
ಮುಂಬೈನಲ್ಲಿರೋ ಯಾಕೂಬ್ ಸಮಾಧಿಗೆ ಬಿಳಿ ಅಮೃತ ಶಿಲೆಯಿಂದ ಬೌಂಡರಿ ನಿರ್ಮಾಣ ಮಾಡಲಾಗಿದೆ ಜೊತೆಗೆ ಎಲ್‌ಇಡಿ ಲೈಟಿಂಗ್‌ಗಳಿಂದ ಅಲಂಕರಿಸಲಾಗಿದೆ.
ಸಿಂಗಾರಗೊಂಡಿರುವ ಯಾಕೂಬ್ ಸಮಾಧಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿವಾದದ ಕುರಿತು ತನಿಖೆಗೆ ಸಹ ಆದೇಶಿಸಲಾಗಿದೆ. ಮುಂಬೈನ ಡಿಸಿಪಿ ನೀಲೋತ್ಪಾಲ್ ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ಪೊಲೀಸರು ವಕ್ಫ್ ಬೋರ್ಡ್, ಬಿಎಂಸಿ ಮತ್ತು ದತ್ತಿ ಆಯುಕ್ತರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಯಾಕೂಬ್ ಮೆಮನ್ ಶವವನ್ನು ಸಮಾಧಿ ಮಾಡಿದ ಸ್ಥಳ, ಬಡಾ ಕಬ್ರಸ್ತಾನ್ ಸೈಟ್ ಸಮಾಧಿ, ವಕ್ಫ್ ಮಂಡಳಿಯ ವ್ಯಾಪ್ತಿಗೆ ಬರುತ್ತದೆ. ಬಿಳಿ ಅಮೃತಶಿಲೆಯ ಗಡಿ ನಿರ್ಮಾಣ ಮಾಡಿ ಎಲ್‌ಇಡಿ ದೀಪಗಳನ್ನು ಹಾಕಿದವರು ಯಾರು ಅನ್ನೋದು ಬೆಳಕಿಗೆ ಬಂದಿಲ್ಲ.
ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಸರ್ಕಾರ ಅಧಿಕಾರದಲ್ಲಿದ್ದಾಗ ಉದ್ಧವ್ ಠಾಕ್ರೆ ಅವರ ಆಳ್ವಿಕೆಯಲ್ಲಿ ಇದನ್ನು ಮಾಡಲಾಗಿತ್ತು ಎಂದು ಬಿಜೆಪಿ ಮುಖಂಡ ರಾಮ್ ಕದಮ್ ಆರೋಪಿಸಿದ್ದಾರೆ. ಈ ಕುರಿತಂತೆ ಅವರು ಟ್ವೀಟ್ ಮಾಡಿದ್ದಾರೆ.
ಇದು ಉದ್ಧವ್ ಠಾಕ್ರೆ ಅವರ ಮುಂಬೈ ಮೇಲಿನ ಪ್ರೀತಿ, ದೇಶಭಕ್ತಿಯೇ ? ಶರದ್ ಪವಾರ್, ರಾಹುಲ್ ಗಾಂಧಿ ಮತ್ತು ಉದ್ಧವ್ ಮುಂಬೈ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ರಾಮ್ ಕದಮ್ ಒತ್ತಾಯಿಸಿದ್ದಾರೆ.
ಈ ವಿವಾದದ ಬೆನ್ನಲ್ಲೇ ಮುಂಬೈ ಪೊಲೀಸರು ಸಮಾಧಿಗೆ ಹಾಕಲಾಗಿದ್ದ ಎಲ್‌ಇಡಿ ಲೈಟ್‌ಗಳನ್ನು ತೆರವು ಮಾಡಿದ್ದಾರೆ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಏಕೈಕ ಅಪರಾಧಿ ಯಾಕೂಬ್ ಮೆಮನ್. 2015ರ ಜುಲೈ 30ರಂದು ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಆತನನ್ನು ಗಲ್ಲಿಗೇರಿಸಲಾಗಿತ್ತು. ನಂತರ ದಕ್ಷಿಣ ಮುಂಬೈನ ಮೆರೈನ್ ಲೈನ್ಸ್ ಬಡಾ ಕಬ್ರಸ್ತಾನ್‌ನಲ್ಲಿ ಸಮಾಧಿ ಮಾಡಲಾಯಿತು. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಯಾಕೂಬ್ 1993ರ ಸ್ಫೋಟದ ಆರೋಪಿ ಟೈಗರ್ ಮೆಮನ್‌ನ ಕಿರಿಯ ಸಹೋದರ.