ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಈಗಾಗಲೇ ಭೀಕರ ದಾಳಿ ನಡೆಸುತ್ತಿದೆ. ರಷ್ಯಾ ಪಡೆಗಳು ನಡೆಸಿದ ಶೆಲ್ ದಾಳಿಯಿಂದಾಗಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 9 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗಾಗ್ಲೇ ರಷ್ಯಾ ಸೈಬರ್ ದಾಳಿ ಕೂಡ ನಡೆಸಿದ್ದು, ಉಕ್ರೇನ್ ನ ಸರ್ಕಾರಿ ವೆಬ್‌ಸೈಟ್ ಗಳು ಕೂಡ ಹ್ಯಾಕ್ ಆಗಿವೆ. ಮಿಲಿಟರಿ ಪಡೆಗಳು ಚೆಲ್ಲಾಪಿಲ್ಲಿಯಾಗಿವೆ. ಇನ್ನು ಈ ಸಂದರ್ಭದಲ್ಲಿ ಮಿಸೈಲ್ ದಾಳಿಯ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ.
ಅಲೆಕ್ ಲನ್ ಎನ್ನುವ ರಷ್ಯಾದ ಮಾಜಿ ಕರೆಸ್ಪಾಂಡೆಂಟ್ ದಾಳಿಯ ಹಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಮೇಲೆ ಮೊದಲ ಮಿಸೈಲ್ ದಾಳಿ, ಕಾರ್ಕೀವ್ ನಲ್ಲಿ ನಡೆದಿದೆ. ಕೆರ್ಸೋನ್ ವಿಮಾನ ನಿಲ್ದಾಣದ ಮೇಲೂ ದಾಳಿಯಾಗಿದೆ. ಉಕ್ರೇನ್ ನ ಮಾಹಿತಿಯಂತೆ ರಷ್ಯಾ ಹಾಗೂ ಬೆಲಾರುಸಿಯನ್ ಮಿಲಿಟರಿ ಪಡೆ ಫೈಯರ್ ಆರ್ಮ್ಸ್ ನಿಂದ ಕಾರ್ಕೀವ್, ಜೈಟೋಮಿರ್, ಲೆಹಾನ್ಸ್ಕ್ ಪ್ರದೇಶಗಳಲ್ಲಿ ಗಡಿ ಸೈನಿಕರನ್ನು ಹೊಡೆದುರಿಳಿಸಿದೆಯಂತೆ.
ಇನ್ನು ಪೋಲ್ಯಾಂಡ್ ಹಾಗೂ ಬೆಲಾರುಸ್ ಬಳಿಯ ಸೈನ್ಯದ ಮೇಲೆ ದಾಳಿ ನಡೆಸಲಾಗಿದ್ದು, ಈಶಾನ್ಯ ಉಕ್ರೇನ್ ಬಳಿಯ ಮಿಲಿಟರಿ ಕಟ್ಟಡದ ಮೇಲೆ ಕ್ಷಿಪಣಿಗಳ ದಾಳಿ ನಡೆದಿದೆ ಎಂದು ವರದಿಯಾಗಿದೆ. ರಷ್ಯಾದ ಯುದ್ಧ ಟ್ಯಾಂಕ್ ಗಳು ಬೆಲಾರುಸ್ ನಿಂದ ಉಕ್ರೇನ್ ಗಡಿಯೊಳಗೆ ನುಗ್ಗಿವೆ ಎಂದು ವರದಿಯಾಗಿದೆ.
ಉಕ್ರೇನ್ ರಷ್ಯಾದ ಐದು ಯುದ್ಧ ವಿಮಾನಗಳು ಹಾಗೂ ಒಂದು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ, ಆದರೆ ಪ್ರತ್ಯೇಕವಾದಿಗಳು ಸತ್ತವರು ಉಕ್ರೇನ್ ಸೈನಿಕರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ರಷ್ಯಾದ ಉತ್ತರ ಭಾಗದಲ್ಲಿ ಶಾಲೆ ಹಾಗೂ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದ್ದು, ಈ ದಾಳಿ ಇನ್ನಷ್ಟು ದಿನ ನಡೆಯಲಿದೆ ಎಂಬುದು ಸ್ಪಷ್ಟವಾಗಿದೆ.
ಕೆಲ ಕ್ಷಣಗಳ ಹಿಂದೆ ಪಶ್ಚಿಮ ಉಕ್ರೇನ್‌ನ ಇವಾನೊ-ಫ್ರಾಂಕಿವ್ಸ್ಕ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಕ್ಷಿಪಣಿಯೊಂದು ಅಪ್ಪಳಿಸಿದೆ ಎಂದು ವರದಿಯಾಗಿದೆ.