ಖಾರ್ಕೀವ್: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಒಂದು ತಿಂಗಳು ಕಳೆದಿದೆ. ದೇಶದ ಅರ್ಧಕ್ಕಿಂತ ಹೆಚ್ಚು ಮಕ್ಕಳು ಸ್ಥಳಾಂತರಗೊಂಡಿದ್ದಾರೆ. ಲಕ್ಷಾಂತರ ಜನರು ಸೂರಿಲ್ಲದೆ ಮೆಟ್ರೋ ನಿಲ್ದಾಣಗಳಲ್ಲಿ ತಂಗುತ್ತಿದ್ದಾರೆ. ಇಂತಹ ಕಠೋರ ಸುದ್ದಿಗಳ ನಡುವೆ, ಸೂಪರ್ ಹೀರೋ ನಂತೆ ವೇಷಭೂಷಣವನ್ನು ಧರಿಸಿರುವ ಮೂವರು ಮಕ್ಕಳೊಂದಿಗೆ ಆಟವಾಡಿದ್ದಾರೆ.
ಮೆಟ್ರೋ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದ ಮಕ್ಕಳ ಮನಸ್ಸಿನಲ್ಲಿರೋ ದುಗುಡವನ್ನು ದೂರ ಮಾಡಲು ಮೂವರು ವ್ಯಕ್ತಿಗಳು ಸೂಪರ್ ಹೀರೋ ವೇಷತೊಟ್ಟಿದ್ದಾರೆ. ಇವರ ವರ್ತನೆಯನ್ನು ಕಂಡ ಮಕ್ಕಳು ಖುಷಿಯಿಂದ ನಗೆ ಬೀರಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಸ್ಪೈಡರ್ಮ್ಯಾನ್, ಬ್ಯಾಟ್ಮ್ಯಾನ್ ಮತ್ತು ಗುಲಾಬಿ ಬಣ್ಣದ ಮೊಲದಂತೆ ಮೂವರು ವ್ಯಕ್ತಿಗಳು ವೇಷ ಧರಿಸಿದ್ದಾರೆ. ಖಾರ್ಕಿವ್ ಮೆಟ್ರೋ ನಿಲ್ದಾಣದಲ್ಲಿ ಮಕ್ಕಳೊಂದಿಗೆ ಆಟವಾಡಿದ್ದು, ಅವರ ಉತ್ಸಾಹವನ್ನು ಹೆಚ್ಚಿಸಿದ್ದಾರೆ. ಮಕ್ಕಳು ನಗುವಾಗ ವ್ಯಕ್ತಿಗಳು ಹರ್ಷಚಿತ್ತದಿಂದ ಅವರೊಂದಿಗೆ ಮಾತನಾಡಿದ್ದಾರೆ. ಮಕ್ಕಳೊಂದಿಗೆ ನೃತ್ಯ ಮತ್ತು ಮೋಜಿನ ಚಟುವಟಿಕೆಗಳನ್ನು ಮಾಡಿದ್ದು, ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಉಕ್ರೇನ್ನ ಮೆಟ್ರೋ ನಿಲ್ದಾಣಗಳಲ್ಲಿ ಮಕ್ಕಳು ಸೂಪರ್ಹೀರೋಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋವನ್ನು 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ವೇಷಧಾರಿಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.