ಕೀವ್: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ತಾರಕ್ಕಕೇರಿದ್ದು, ಮೂರನೇ ದಿನವಾದ ಇಂದು ರಷ್ಯಾ ತನ್ನ ದಾಳಿ ತೀವ್ರಗೊಳಿಸಿದೆ. ಉಕ್ರೇನ್ ರಾಜಧಾನಿ ಕೀವ್ ನಲ್ಲಿ ರಷ್ಯಾ ಸೇನೆ ರಣಕೇಕೆ ಹಾಕಿದ್ದು, ಒಂದೆಡೆ ಕ್ಷಿಪಣಿ, ಇನ್ನೊಂದೆಡೆ ಗುಂಡಿನ ದಾಳಿ, ಮತ್ತೊಂದೆಡೆ ಬಾಂಬ್ ಸ್ಫೋಟ ನಡೆಸುವ ಮೂಲಕ ಅಟ್ಟಹಾಸ ಮೆರೆದಿದೆ.
ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಲ್ಲ, ಉಕ್ರೇನ್ ಸೇನಾನೆಲೆ ಮಾತ್ರ ನಮ್ಮ ಗುರಿ ಎಂದಿದ್ದ ರಷ್ಯಾ ಇದೀಗ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿದೆ. ಕೀವ್ ನ ಅಪಾರ್ಟ್ ಮೆಂಟ್ ಗಳ ಮೆಲೆ ಕ್ಷಿಪಣಿ ದಾಳಿ ನಡೆಸಲಾಗುತ್ತಿದ್ದು, ನೋಡ ನೋಡುತ್ತಿದ್ದಂತೆಯೇ ಕಟ್ಟಡಗಳು ಛಿದ್ರ ಛಿದ್ರಗೊಳ್ಳುತ್ತಿವೆ. ಜನರ ರಕ್ಷಣೆಗಾಗಿ ಉಕ್ರೇನ್ ಸೇನಾಪಡೆ ಧಾವಿಸಿವೆ.
ದೇಶದಲ್ಲಿ 50 GWH ಬ್ಯಾಟರಿ ಸ್ಥಾವರ ನಿರ್ಮಾಣಕ್ಕೆ ಮುಂದಾದ ಓಲಾ ಎಲೆಕ್ಟ್ರಿಕ್…..!
ಈ ನಡುವೆ ಉಕ್ರೇನ್ ನ ಏರ್ ಫೀಲ್ಡ್ ನ್ನು ರಷ್ಯಾ ಮಿಲಿಟರಿ ಪಡೆ ವಶಕ್ಕೆ ಪಡೆದುಕೊಂಡಿದ್ದು, ಕೀವ್ ಏರ್ ಪೋರ್ಟ್ ಮೇಲೂ ದಾಳಿ ನಡೆಸಿದೆ. ಕೀವ್ ನಗರದ ಹೆದ್ದಾರಿಗಳಲ್ಲಿ ರಷ್ಯಾ ಯುದ್ಧ ಟ್ಯಾಂಕರ್ ಗಳನ್ನು ನಿಲ್ಲಿಸಿದೆ. ಅಲ್ಲದೇ ಕೀವ್ ನಲ್ಲಿ ಇಂಟರ್ ನೆಟ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಅಲ್ಲಿನ ಜನರನ್ನು ಸಂಪರ್ಕಿಸುವುದೂ ಕಷ್ಟ ಸಾಧ್ಯವಾಗಿದೆ.
ಇನ್ನೊಂದೆಡೆ ಖರ್ಕೀವ್ ನಲ್ಲಿ ಮೆಡಿಕಲ್ ಕಾಲೇಜು ಬಳಿಯೂ ಬಾಂಬ್ ಸ್ಫೋಟ ನಡೆಸಲಾಗಿದ್ದು, ನಾಗರಿಕರು, ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಕಾನೋಟಾಪ್ ನಗರದಲ್ಲಿಯೂ ಎರಡು ಬಾಂಬ್ ದಾಳಿ ನಡೆಸಲಾಗಿದೆ. ಒಟ್ಟಾರೆ ಉಕ್ರೇನ್ ಸಂಪೂರ್ಣ ಯುದ್ಧ ಭೂಮಿಯಾಗಿ ಮಾರ್ಪಟ್ಟಿದ್ದು ನಾಗರಿಕರು ದೇಶ ತೊರೆಯುತ್ತಿದ್ದಾರೆ.