ದೆಹಲಿ: ಕೈವ್‌ನಿಂದ ಪಲಾಯನ ಮಾಡಿದ ತನ್ನ ಉಕ್ರೇನಿಯನ್ ಗೆಳತಿ ಭಾರತಕ್ಕೆ ಬಂದಿಳಿದ ಕೂಡಲೇ ದೆಹಲಿ ಹೈಕೋರ್ಟ್ ವಕೀಲರೊಬ್ಬರು ಆಕೆಗೆ ಪ್ರಪೋಸ್ ಮಾಡಿದ್ದಾರೆ.
33 ವರ್ಷದ ಅನುಭವ್ ಭಾಸಿನ್ ಹಾಗೂ ಉಕ್ರೇನ್ ನ 29 ವರ್ಷದ ಅನ್ನಾ ಹೊರೊಡೆಟ್ಸ್ಕಾ ಸುಮಾರು ಎರಡೂವರೆ ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದಾರೆ. ಮೊದಲ ಕೋವಿಡ್-19 ಲಾಕ್‌ಡೌನ್ ಘೋಷಿಸಿದಾಗ ಇವರಿಬ್ಬರೂ ಒಟ್ಟಿಗೆ ಪ್ರಯಾಣಿಸುತ್ತಿದ್ದರು. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅನ್ನಾ, ವಿಮಾನಗಳ ರದ್ದತಿಯಿಂದಾಗಿ ದೆಹಲಿಯಲ್ಲಿ ಉಳಿಯುವಂತಾಯಿತು. ಆಕೆ ತನ್ನ ದೇಶಕ್ಕೆ ಹಿಂತಿರುಗುವವರೆಗೂ ಅನುಭವ್‌ನ ಮನೆಯಲ್ಲೇ ವಾಸವಿದ್ದಳು.
ಲಾಕ್‌ಡೌನ್ ಮುಗಿದ ನಂತರ ಮತ್ತೆ ದುಬೈನಲ್ಲಿ ಭೇಟಿಯಾಗಿದ್ದರಂತೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದ ಅನ್ನಾ, ಅನುಭವ್ ನ ಕುಟುಂಬವನ್ನು ಭೇಟಿಯಾಗಿದ್ದಳು. ಮತ್ತೆ ಉಕ್ರೇನ್‌ಗೆ ವಾಪಸ್ಸಾಗಿದ್ದಳು.
ಫೆಬ್ರವರಿ 24 ರಂದು ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗ, ಅನ್ನಾ ಪೋಲೆಂಡ್ಗೆ ಪಲಾಯನ ಮಾಡಲು ನಿರ್ಧರಿಸಿದ್ದಾಳೆ. ಫೆಬ್ರವರಿ 27 ರಂದು ತನ್ನ ತಾಯಿ ಮತ್ತು ನಾಯಿಯೊಂದಿಗೆ ತನ್ನ ಮನೆಯನ್ನು ತೊರೆದಿದ್ದಾಳೆ. ಬಹಳ ಕಷ್ಟಪಟ್ಟ ಕುಟುಂಬ, ಹಲವು ದಿನಗಳ ಬಳಿಕ ಪೋಲೆಂಡ್ ತಲುಪಿದೆ. ಅಂತಿಮವಾಗಿ, ಆಕೆ ಪೋಲೆಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ. ವೀಸಾ ಮಂಜೂರಾದಾಗ, ಅನ್ನಾ ಭಾರತಕ್ಕೆ ಬಂದಿಳಿದಿದ್ದಾಳೆ. ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಅಭಿನವ್ ಅನ್ನಾಗೆ ಪ್ರಪೋಸ್ ಮಾಡಿದ್ದಾರೆ.
ಈ ಪ್ರೇಮ ಪಕ್ಷಿಗಳು ಶೀಘ್ರದಲ್ಲೇ ಮದುವೆಯಾಗಲು ನಿರ್ಧರಿಸಿದ್ದಾರೆ. ಅನ್ನಾ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ.