ರಷ್ಯಾ ಪಡೆಗಳಿಗೆ ಸೆರೆಸಿಕ್ಕು ಬದುಕುಳಿದಿರುವ ಉಕ್ರೇನ್ ಸೈನಿಕನ ಆಘಾತಕಾರಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇವೆ. ಉಕ್ರೇನ್‌ನ ರಕ್ಷಣಾ ಸಚಿವಾಲಯ, ಯೋಧ ಮೈಖೈಲೋ ಡಯಾನೋವ್ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.
ಗಟ್ಟಿಮುಟ್ಟಾಗಿ, ಬಲಾಢವಾಗಿದ್ದ ಈ ಸೈನಿಕ, ರಷ್ಯಾ ಪಡೆಗಳ ಚಿತ್ರಹಿಂಸೆಯಿಂದ ಸಂಪೂರ್ಣ ಸೋತುಹೋಗಿದ್ದಾರೆ. ಸಣಕಲು ದೇಹ, ಮುರಿದ ಕೈಗಳು, ಸೋತು ಸುಣ್ಣವಾಗಿರುವ ಮುಖ, ದೇಹದ ತುಂಬೆಲ್ಲಾ ಗಾಯದ ಕಲೆಗಳು ಇವೆಲ್ಲವೂ ರಷ್ಯಾದ ಕ್ರೌರ್ಯಕ್ಕೆ ಸಾಕ್ಷಿಯಾಗಿವೆ.
ಆದ್ರೆ ಸೈನಿಕ ಬದುಕಿರುವುದೇ ಅದೃಷ್ಟ ಅಂತಾ ಉಕ್ರೇನ್ ಟ್ವೀಟ್ ಮಾಡಿದೆ. ತನ್ನ ನಾಚಿಕೆಗೇಡಿನ ಪರಂಪರೆಯನ್ನು ರಷ್ಯಾ ಈ ರೀತಿ ಮುಂದುವರಿಸಿದೆ ಅಂತಾ ಟೀಕಿಸಿದೆ.
ಮಾರಿಯುಪೋಲ್ ಯುದ್ಧದ ನಂತರ ಮೈಖೈಲೋ ಡಯಾನೋವ್ ರಷ್ಯಾದ ಜೈಲು ಶಿಬಿರಗಳಲ್ಲಿ ನಾಲ್ಕು ತಿಂಗಳುಗಳನ್ನು ಕಳೆದಿದ್ದಾರೆ. ಇತ್ತೀಚೆಗಷ್ಟೆ ರಷ್ಯಾದ ಕಪಿಮುಷ್ಠಿಯಿಂದ ಬಿಡುಗಡೆಯಾಗಿದ್ದಾರೆ. ಮೈಖೈಲೋ ಡಯಾನೋವ್ ಅವರನ್ನು ಕೀವ್‌ನ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮೇ ತಿಂಗಳಲ್ಲಿ, ಮೈಖೈಲೋ ಡಯಾನೋವ್ ಅವರ ದಣಿದ ಮತ್ತು ಗಡ್ಡಧಾರಿ ಫೋಟೋ ವೈರಲ್ ಆಗಿತ್ತು. ನೋವಿನಲ್ಲೂ ಯೋಧ ನಗುತ್ತಿದ್ದ. ಉಕ್ರೇನ್ ಸೈನಿಕನ ಮುಖದಲ್ಲಿ ಶಾಂತಿಯ ಸಂಕೇತವಿತ್ತು. ಆದ್ರೀಗ ಯೋಧನಿಗೆ ರಷ್ಯಾ ಇನ್ನಿಲ್ಲದ ಹಿಂಸೆ ನೀಡಿ ಬದುಕಿದ್ದಾಗ್ಲೇ ಸತ್ತಂತೆ ಮಾಡಿಬಿಟ್ಟಿದೆ.
ಸೆಪ್ಟೆಂಬರ್ 21 ರಂದು 215 ಖೈದಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿತ್ತು. ಅವರಲ್ಲಿ ಉಕ್ರೇನ್‌ನ ಅಜೋವ್ ರೆಜಿಮೆಂಟ್‌ನ ಸೈನಿಕ ಮೈಖೈಲೋ ಡಯಾನೋವ್ ಕೂಡ ಒಬ್ಬರು. ಮಾರಿಯುಪೋಲ್ ಬಂದರು ನಗರದಲ್ಲಿರುವ ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರವನ್ನು ವಶಪಡಿಸಿಕೊಳ್ಳಲು ಕಳುಹಿಸಲಾದ 2,000 ಸೈನಿಕರಲ್ಲಿ ಡಯಾನೋವ್ ಕೂಡ ಇದ್ದರು. ಮೇ ತಿಂಗಳಿನಲ್ಲಿ ರಷ್ಯಾ ಆತನನ್ನ ಸೆರೆಹಿಡಿದಿತ್ತು.