ರಷ್ಯಾ ಆಕ್ರಮಣದಿಂದ ನಲುಗಿ ಹೋಗಿರುವ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದ ಬಹುತೇಕ ಭಾರತೀಯರು ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ. ಕೆಲವರು ತಮ್ಮ ಪ್ರೀತಿಯ ಸಾಕು ಪ್ರಾಣಿಗಳನ್ನು ಕೂಡ ಹೊತ್ತು ತಂದಿದ್ದಾರೆ.
ಇನ್ನು ಕೆಲವರು ಸಾಕು ಪ್ರಾಣಿಗಳನ್ನು ಕರೆದುಕೊಂಡು ಬರುವ ಆತುರದಲ್ಲಿ ತಮ್ಮ ಕೆಲವು ವಸ್ತುಗಳನ್ನು ಅಲ್ಲೇ ಬಿಟ್ಟು ಬಂದಿದ್ದಾರೆ.
ಭಾರತೀಯ ಮೂಲದ ವೈದ್ಯನೊಬ್ಬ ತಾನು ಸಾಕಿದ ಪ್ರೀತಿಯ ಪ್ರಾಣಿಗಳನ್ನು ಬಿಟ್ಟು ಸ್ವದೇಶಕ್ಕೆ ಮರಳಲು ಸಿದ್ಧನಿಲ್ಲ. ಅಷ್ಟಕ್ಕೂ ಈತ ಸಾಕಿರೋದು ಕರಿ ಚಿರತೆ ಹಾಗೂ ಜಾಗ್ವಾರ್.
ಗಿರಿಕುಮಾರ್ ಪಾಟೀಲ್ ಎಂಬ ವೈದ್ಯ 20 ತಿಂಗಳುಗಳ ಹಿಂದೆ ಕೀವ್ ನ ಮೃಗಾಲಯದಿಂದ ಈ ಚಿರತೆಗಳನ್ನು ತಂದಿದ್ದರು. ಕರಿ ಚಿರತೆಗೆ ಈಗ 6 ತಿಂಗಳು. ಜಾಗ್ವಾರ್ ಗೆ 20 ತಿಂಗಳ ಪ್ರಾಯ. 6 ವರ್ಷಗಳಿಂದ ಗಿರಿಕುಮಾರ್ ಉಕ್ರೇನ್ ನಲ್ಲಿ ನೆಲೆಸಿದ್ದಾರಂತೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸ್ತಿದ್ದಾರೆ. ಯುದ್ಧ ಪ್ರಾರಂಭವಾದ ಬಳಿಕ ಆಸ್ಪತ್ರೆಯನ್ನು ಬಂದ್ ಮಾಡಲಾಗಿದೆ.
35,000 ಡಾಲರ್ ಕೊಟ್ಟು ಈ ಚಿರತೆಗಳನ್ನು ಅವರು ಖರೀದಿ ಮಾಡಿದ್ದರು. ಇವುಗಳ ಜೊತೆಗೆ 3 ನಾಯಿಗಳನ್ನೂ ಸಾಕಿಕೊಂಡಿದ್ದಾರೆ. ಸದ್ಯ ನೆಲಮಾಳಿಗೆಯೊಂದರಲ್ಲಿ ತನ್ನ ಸಾಕು ಪ್ರಾಣಿಗಳೊಂದಿಗೆ ಉಕ್ರೇನ್ ನಲ್ಲಿ ನೆಲೆಸಿರೋ ಗಿರಿಕುಮಾರ್, ಪ್ರತಿಕ್ಷಣವೂ ಮಾರ್ದನಿಸುತ್ತಿರುವ ಬಾಂಬ್ ಸ್ಫೋಟದ ಸದ್ದಿನಿಂದ ಕಂಗೆಟ್ಟಿದ್ದಾರಂತೆ.
ಚಿರತೆಗಳು ಕೂಡ ಭಯದಿಂದ ಸರಿಯಾಗಿ ಆಹಾರ ತಿನ್ನುತ್ತಿಲ್ಲ ಅಂತಾ ಅಳಲು ತೋಡಿಕೊಂಡಿದ್ದಾರೆ. ಸಾಕು ಪ್ರಾಣಿಗಳಿಗೆ ಆಹಾರ ತರಲು ಮಾತ್ರ ಮನೆಯಿಂದ ಆತ ಹೊರಹೋಗುತ್ತಿದ್ದಾರಂತೆ. ಈ ಹಿಂದೆ 2014ರಲ್ಲೂ ಗಿರಿಕುಮಾರ್ ಉಕ್ರೇನ್ ನಲ್ಲಿ ನಡೆದ ಯುದ್ಧಕ್ಕೆ ಸಾಕ್ಷಿಯಾಗಿದ್ದರು. ಆತನ ಹೆತ್ತವರು ಆತಂಕಕ್ಕೀಡಾಗಿದ್ದು, ಭಾರತಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾರೆ. ಆದ್ರೆ ಆಂಧ್ರಪ್ರದೇಶ ಮೂಲದ ಗಿರಿಕುಮಾರ್, ಸಾಕು ಪ್ರಾಣಿಗಳನ್ನು ಬಿಟ್ಟು ಬರಲು ಸಾಧ್ಯವಿಲ್ಲ ಎಂದಿದ್ದಾರೆ.