ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿ ವಾರವಾಗುತ್ತಾ ಬಂತು. ಬಾಂಬ್ ದಾಳಿಯ ಭಯಾನಕ ದೃಶ್ಯಗಳು ಜನರನ್ನು ನಡುಗಿಸಿವೆ. ಉಕ್ರೇನ್ ನಾಗರೀಕರು ಪ್ರಾಣ ಉಳಿಸಿಕೊಳ್ಳಲು ಪೋಲೆಂಡ್ ದೇಶದ ಆಶ್ರಯ ಬೇಡುತ್ತಿದ್ದಾರೆ.
ವೃದ್ಧರು, ಪುಟ್ಟ ಪುಟ್ಟ ಮಕ್ಕಳೆಲ್ಲ ಹೈವೇ ಮೂಲಕ ನಡೆದುಕೊಂಡೇ ಪೋಲೆಂಡ್ ನತ್ತ ಸಾಗುತ್ತಿದ್ದಾರೆ. ಉಕ್ರೇನ್ ನಲ್ಲಿ ಓದ್ತಾ ಇರೋ ಭಾರತೀಯ ಮೂಲದ 40 ವಿದ್ಯಾರ್ಥಿಗಳು ಕೂಡ 8 ಕಿಮೀ ದೂರ ನಡೆದಿದ್ದಾರೆ. ತನಗಾದ ಭಯಾನಕ ಅನುಭವವನ್ನು ವಿದ್ಯಾರ್ಥಿಯೊಬ್ಬ ಹಂಚಿಕೊಂಡಿದ್ದಾನೆ.
ಉಕ್ರೇನ್ ಕಾನ್ಪಿಕ್ಲ್ಟ್ 2022 ಎಂಬ ಟ್ವಿಟ್ಟರ್ ಪೇಜ್ ನಲ್ಲಿ ಮನ್ನಿ ಮರೋತ್ತಾ ಎಂಬಾತ ಕಾಲ್ನಡಿಗೆಯಲ್ಲಿ 8 ಕಿಮೀ ದೂರ ನಡೆದಿರೋ ಬಗ್ಗೆ ಹೇಳಿಕೊಂಡಿದ್ದಾನೆ. ಸುಮಾರು 25 ಕಿಮೀ ದೂರಕ್ಕೂ ಕಾರುಗಳು ಸಾಲುಗಟ್ಟಿ ನಿಂತಿದ್ವು. ಬಹುತೇಕ ಕಾರುಗಳಲ್ಲಿ ಇಂಧನವಿರಲಿಲ್ಲ.
ಇನ್ನೊಂದ್ಕಡೆ ಉಕ್ರೇನ್ ಸೇನೆ ಸೇರಲು ಯಾರಾದರೂ ಸಿಗಬಹುದೆಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಯೋಧರು, ಏನಾಗ್ತಿದೆ ಅನ್ನೋ ಅರಿವಿಲ್ಲದೆ ಹಸಿವಿನಿಂದ ಅಳ್ತಾ ಇದ್ದ ಕಂದಮ್ಮಗಳು, 80 ಕಿಮೀ ದೂರ ನಡೆದುಕೊಂಡಾದ್ರೂ ಪೋಲೆಂಡ್ ಸೇರಿಕೊಳ್ಳಬೇಕೆಂಬ ತವಕದಲ್ಲಿದ್ದ ವೃದ್ಧ ಮಹಿಳೆಯರು, ಹೀಗೆ ದಾರಿಯುದ್ದಕ್ಕೂ ಕಂಡು ಬಂದ ದೃಶ್ಯ ಹೃದಯ ವಿದ್ರಾವಕವಾಗಿತ್ತು.
ಯುದ್ಧಪೀಡಿತ ಉಕ್ರೇನ್ ನ ಭಯಾನಕ ದೃಶ್ಯಗಳಿಗೆ ಮೂಕ ಪ್ರೇಕ್ಷಕನಂತಿದ್ದ ಭಾರತದ ವಿದ್ಯಾರ್ಥಿ ಸುರಕ್ಷಿತವಾಗಿ ಪೋಲೆಂಡ್ ತಲುಪಿದ್ದಾನೆ. ಬಿಸಿ ಬಿಸಿ ಚಹಾದೊಂದಿಗೆ ಪೋಲೆಂಡ್ ನಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ. ಆತ ಮಾಡಿರೋ ಟ್ವೀಟ್ ಈಗ ವೈರಲ್ ಆಗಿದೆ.