ರಷ್ಯಾವನ್ನು ಸೆದೆಬಡಿಯಲು ಉಕ್ರೇನ್ ತನ್ನೆಲ್ಲಾ ಶಕ್ತಿಯನ್ನೂ ಬಳಕೆ ಮಾಡ್ತಿದೆ. ಯುದ್ಧ ಉಲ್ಬಣಗೊಂಡಿರೋ ಈ ಸಮಯದಲ್ಲಿ ಉಕ್ರೇನ್ ನ ಕಟ್ಟಡಗಳು ಹಾಗೂ ಟ್ಯಾಂಕರ್ ಗಳ ಮೇಲಿರುವ ನಿಗೂಢ ಚಿಹ್ನೆಗಳು ಎಲ್ಲರ ಗಮನ ಸೆಳೆಯುತ್ತಿವೆ.
ಇದು ರಷ್ಯಾ ಅತಿ ದೊಡ್ಡ ವೈಮಾನಿಕ ದಾಳಿ ನಡೆಸಲು ಮಾಡಿಕೊಂಡಿರುವ ರಹಸ್ಯ ತಯಾರಿ ಅಂತಾನೂ ಹೇಳಲಾಗ್ತಿದೆ. ಈಗಾಗ್ಲೇ ಈ ಚಿಹ್ನೆಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿವೆ.
ಕಟ್ಟಡ ಹಾಗೂ ಶೆಲ್ ಗಳ ಮೇಲಿರೋ ಈ ಕ್ರಾಸ್ ಮಾರ್ಕ್ ಭಯವನ್ನೂ ಹುಟ್ಟುಹಾಕಿದೆ. ಕಟ್ಟಡಗಳ ಮೇಲೆ ಇಂತಹ ಚಿಹ್ನೆಗಳೇನಾದ್ರೂ ಕಂಡುಬಂದಲ್ಲಿ ಸುರಕ್ಷಿತ ಜಾಗಕ್ಕೆ ತೆರಳಿ ಅಂತಾ ಉಕ್ರೇನ್ ಸರ್ಕಾರವೂ ಸೂಚಿಸಿದೆ.
ವೈಮಾನಿಕ ದಾಳಿ ನಡೆಸಲು ರಷ್ಯಾ ಈ ಚಿಹ್ನೆಗಳನ್ನು ಗುರುತಾಗಿ ಬಳಸಿಕೊಳ್ತಿದೆ ಎನ್ನಲಾಗ್ತಿದೆ. ಉಕ್ರೇನ್ ನ ಅತಿ ಎತ್ತರದ ಕಟ್ಟಡಗಳ ಮೇಲೆ ಕೆಂಪು ಹಾಗೂ ಕೇಸರಿ ಬಣ್ಣದಲ್ಲಿ ಈ ಚಿಹ್ನೆಗಳನ್ನು ಬರೆಯಲಾಗಿದೆ. ಯುವಿ ಲೈಟ್ ನಲ್ಲಿ ಮಾತ್ರ ಇದು ಗೋಚರಿಸುತ್ತದೆ.
ಅಂತಹ ಎಲ್ಲಾ ಕಟ್ಟಡಗಳ ಛಾವಣಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಚಿಹ್ನೆಯೇನಾದ್ರೂ ಕಂಡು ಬಂದ್ರೆ ಕೂಡಲೇ ಅಲ್ಲಿಂದ ಸುರಕ್ಷಿತ ಜಾಗಕ್ಕೆ ತೆರಳುವಂತೆ ಉಕ್ರೇನ್ ಸರ್ಕಾರ ಸೂಚನೆ ನೀಡಿದೆ.
ಬೆಲಾರಸ್ ನಲ್ಲಿರೋ ಟ್ಯಾಂಕರ್ ಹಾಗೂ ಹೆಲಿಕಾಪ್ಟರ್ ಗಳ ಮೇಲೆ ವಿ ಎಂಬ ಅಕ್ಷರವನ್ನು ಬರೆಯಲಾಗಿದೆ. ಇದು ಕೂಡ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಯುದ್ಧದಲ್ಲಿ ಬೆಲಾರಸ್, ರಷ್ಯಾವನ್ನು ಬೆಂಬಲಿಸಿದೆ. ಬೆಲಾರಸ್ ನಿಂದ ರಷ್ಯಾಕ್ಕೆ ಕೊಂಡೊಯ್ಯಲಾಗ್ತಿರೋ ಗನ್ ಹಾಗೂ ಹೆಲಿಕಾಪ್ಟರ್ ಮೇಲೆ ವಿ ಎಂಬಕ್ಷರವನ್ನು ಬರೆಯಲಾಗಿದೆ ಅಂತಾನೂ ಹೇಳಲಾಗ್ತಿದೆ.
ರಷ್ಯಾದ ಮಿಲಿಟರಿ ಟ್ರಕ್ ಗಳ ಮೇಲೆ ಬಿಳಿಯ ಬಣ್ಣದಲ್ಲಿ ಝೆಡ್ ಎಂದು ಬರೆಯಲಾಗಿದೆ. ಎರಡೂ ಬದಿಯಲ್ಲಿ ಎರಡು ಗೆರೆಗಳನ್ನು ಹೊಂದಿರುವ ಬಿಳಿ ತ್ರಿಕೋನ, ಕೆಂಪು ತ್ರಿಕೋನ, ಬಿಳಿ ವೃತ್ತಗಳು, ಬಿಳಿ ತ್ರಿಕೋನಗಳು ಮತ್ತು ಬಿಳಿ ಸ್ಲ್ಯಾಷ್‌ಗಳಂತಹ ಚಿಹ್ನೆಗಳು ಕೂಡ ಕೆಲವು ವಾಹನಗಳ ಮೇಲೆ ಕಂಡುಬಂದಿವೆ. ರಷ್ಯಾದ ಯೋಧರಿಗೆ ಗುರುತು ಸಿಗಲಿ ಎಂಬ ಕಾರಣಕ್ಕೆ ಈ ರೀತಿ ಚಿಹ್ನೆಗಳನ್ನು ಬರೆಯಲಾಗಿದೆಯಂತೆ. ಪರಸ್ಪರರ ಮೇಲೆ ದಾಳಿಯಾಗದಂತೆ ಎಚ್ಚರಿಕೆ ವಹಿಸಲು ರಷ್ಯಾ ಈ ಯೋಜನೆ ರೂಪಿಸಿದೆ.