ರಷ್ಯಾದ ಸೇನಾ ಕಾರ್ಯಾಚರಣೆಯಿಂದಾಗಿ ಸಂಘರ್ಷ ಪೀಡಿತ ಉಕ್ರೇನ್ನಿಂದ ಸ್ಥಳಾಂತರಿಸಿದ ನಂತರ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವ ಆರ್ಕೆ ಸಿಂಗ್ ಸ್ವಾಗತಿಸಿದ್ದಾರೆ.
ರಾಷ್ಟ್ರ ರಾಜಧಾನಿಗೆ ಬಂದಿಳಿದ ವಿದ್ಯಾರ್ಥಿಗಳು ವಂದೇ ಮಾತರಂ ಘೋಷವಾಕ್ಯವನ್ನು ಮೊಳಗಿಸಿದ್ದು, ರಾಷ್ಟ್ರಧ್ವಜವನ್ನು ಬೀಸಿದ್ದಾರೆ. ಆಪರೇಷನ್ ಗಂಗಾ ಅಡಿಯಲ್ಲಿ ಭಾರತದ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಕೇಂದ್ರ ಸಚಿವರು ಪುನರುಚ್ಚರಿಸಿದ್ದಾರೆ. ಅಲ್ಲಿ ಸಿಲುಕಿರುವ ಪ್ರತಿಯೊಬ್ಬ ಭಾರತೀಯರನ್ನು ಮರಳಿ ಕರೆತರಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಯಾವುದೇ ಸಹಾಯವನ್ನು ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಉಕ್ರೇನ್ ಸುತ್ತಮುತ್ತಲಿನ ಗಡಿಯಲ್ಲಿನ ಪರಿಸ್ಥಿತಿಯು ಭಯಾನಕವಾಗಿದೆ. ಸ್ವದೇಶಕ್ಕೆ ಹಿಂತಿರುಗಿದ್ದರಿಂದ ನಿರಾಳವಾಗಿದ್ದೇವೆ. ವಿದ್ಯಾರ್ಥಿಗಳನ್ನು ಬೆಂಬಲಿಸಿದ ಭಾರತ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿಗೆ ಭಾರತೀಯ ವಿದ್ಯಾರ್ಥಿನಿ ವಿಂಧ್ಯಾ ದೋಷಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಉಕ್ರೇನ್ನಿಂದ ಸ್ಥಳಾಂತರಿಸಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಕೃತಜ್ಞರಾಗಿರುವುದಾಗಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿನಿ ಸಮರಿತಾ ಹಜಾರಿಕಾ ಪ್ರತಿಕ್ರಿಯಿಸಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಮತ್ತಷ್ಟು ಪ್ರಯತ್ನವನ್ನು ಮುಂದುವರೆಸಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಬುಡಾಪೆಸ್ಟ್ಗೆ ತೆರಳಿದ್ದಾರೆ.