ಯುದ್ಧ ಪೀಡಿತ ಉಕ್ರೇನ್‌ನಿಂದ ಬುಧವಾರ ಭಾರತಕ್ಕೆ ಆಗಮಿಸಿದ ಭಾರತೀಯ ಪ್ರಜೆಗಳ ತಂಡವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ವಾಗತಿಸಿದ್ದಾರೆ. ಸಚಿವರು ವಿದ್ಯಾರ್ಥಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಸ್ವಾಗತಿಸಿ ಗಮನಸೆಳೆದಿದ್ದಾರೆ. ಈ ವಿಡಿಯೋವನ್ನು ಸ್ಮೃತಿ ಇರಾನಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇಂಡಿಗೋ ವಿಮಾನದೊಳಗೆ ಸ್ಥಳೀಯ ಭಾಷೆಯಲ್ಲಿ ಮಾತನಾಡುವ ಮೂಲಕ ಸ್ಮೃತಿ ಇರಾನಿ ಭಾರತೀಯ ಪ್ರಜೆಗಳನ್ನು ಸ್ವಾಗತಿಸಿದ್ದಾರೆ. ಮಲಯಾಳಂ, ಬಾಂಗ್ಲಾ, ಗುಜರಾತಿ ಮತ್ತು ಮರಾಠಿ ಭಾಷೆಗಳಲ್ಲಿ ಸಚಿವರು ವೆಲ್ ಕಂ ಮಾಡಿದ್ದಾರೆ.
ಮಂಗಳವಾರದವರೆಗೆ, ಭಾರತವು ಉಕ್ರೇನ್‌ನಿಂದ 12,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದೆ. ಬುಧವಾರ ಉಕ್ರೇನ್‌ನಿಂದ 1,377 ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಆಪರೇಷನ್ ಗಂಗಾ ಅಡಿಯಲ್ಲಿ, ರೊಮೇನಿಯಾ, ಪೋಲೆಂಡ್, ಹಂಗೇರಿ ಮತ್ತು ಉಕ್ರೇನ್‌ನ ಇತರ ನೆರೆಯ ದೇಶಗಳಿಗೆ ದಾಟಿ ಸಿಲುಕಿರುವ ನಾಗರಿಕರನ್ನು ಮರಳಿ ಕರೆತರಲು ಕೇಂದ್ರವು ವಾಣಿಜ್ಯ ಮತ್ತು ಭಾರತೀಯ ವಾಯುಪಡೆಯ ವಿಮಾನಗಳನ್ನು ಕಳುಹಿಸುತ್ತಿದೆ.
ಉಕ್ರೇನ್ ನಿಂದ ಹಿಂದಿರುಗಿದ ನಾಗರಿಕರನ್ನು ಸ್ವಾಗತಿಸಲು ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಕೇಂದ್ರ ಮಂತ್ರಿಗಳನ್ನು ನಿಯೋಜಿಸಲಾಗಿದೆ.