ಕಳೆದ ವಾರ ಉಕ್ರೇನ್ನಲ್ಲಿ ರಷ್ಯಾದ ಆಕ್ರಮಣವು ಮಿತಿಮೀರುತ್ತಿದ್ದಂತೆಯೇ ಹರ್ಡೋಯ್ ಮೂಲದ 25 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಉಕ್ರೇನ್ನಲ್ಲಿ ಸಿಲುಕಿರುವ ನಮ್ಮನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿ ಎಂದು ಮನವಿ ಮಾಡಿದ್ದರು.
ವೈಶಾಲಿ ಯಾದವ್ ಎಂಬವರು ತಮ್ಮ ಮತ್ತು ಇತರೆ ವಿದ್ಯಾರ್ಥಿಗಳ ಬಳಿ ಇರುವ ಆಹಾರ ವಸ್ತುಗಳು ಹೇಗೆ ಖಾಲಿಯಾಗುತ್ತಿದೆ ಎಂದು ವಿವರಿಸಿದ್ದರು ಅಲ್ಲದೇ ಶೀಘ್ರವೇ ನಮ್ಮನ್ನು ಪಾರು ಮಾಡಿ ಎಂದು ಆಶಿಸಿದ್ದರು. ವೈಶಾಲಿ ಯಾದವ್ರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಉಕ್ರೇನ್‌ನ ಇವಾನೊ ಫ್ರಾಂಕ್‌ವಿಸ್ಕ್ ನಗರದಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿರುವ ವೈಶಾಲಿ ಕಳೆದ ವರ್ಷ ತೇರಿ ಪುರ್ಸೌಲಿ ಗ್ರಾಮ ಪಂಚಾಯತ್‌ನಲ್ಲಿ ಪ್ರಧಾನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ತನ್ನ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಒಂದು ತಿಂಗಳು ವೈಶಾಲಿ ತನ್ನ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ 23ರಂದು ಉಕ್ರೇನ್ಗೆ ತೆರಳಿದ್ದರು.
ವೈಶಾಲಿ ಭಾರತಕ್ಕೆ ಮರಳಲು ಸಹಾಯ ಕೋರಿದ್ದ ಸಂದರ್ಭದಲ್ಲಿ ಜನಪ್ರತಿನಿಧಿಯಾಗಿ ವೈಶಾಲಿ ಗೈರು ಹಾಜರಾತಿ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಹರ್ಡೋಯ್ ಆಡಳಿತ ಮಂಡಳಿಯು ವೈಶಾಲಿ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಗ್ರಾಮಪಂಚಾಯ್ತಿ ಪ್ರಧಾನ್ ಆದ ಬಳಿಕ ವೈಶಾಲಿ ಏನೆಲ್ಲ ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.