ಉಕ್ರೇನ್ನಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ವಿದ್ಯಾಭ್ಯಾಸಕ್ಕೆಂದು ಮಕ್ಕಳನ್ನು ಉಕ್ರೇನ್ಗೆ ಕಳುಹಿಸಿರುವ ಪೋಷಕರು ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುತ್ತಾರೋ ಇಲ್ಲವೋ ಎಂದು ಕೈಯಲ್ಲಿ ಜೀವವನ್ನು ಹಿಡಿದು ಕಾಯುವಂತಾಗಿದೆ. ಅದೇ ರೀತಿ ಇಂದು ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪುತ್ರನನ್ನು ತಾಯಿ ಆಲಂಗಿಸಿಕೊಂಡ ಪರಿಯು ಮನಕಲಕುವಂತಿತ್ತು. ಉಕ್ರೇನ್ನಿಂದ ಭಾರತಕ್ಕೆ ವಾಪಸ್ಸಾಗಿರುವ ಶುಭಾಂಶು ಯುದ್ಧ ಪೀಡಿತ ನೆಲದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಪೂರ್ವ ಯುರೋಪಿಯನ್ ರಾಷ್ಟ್ರದ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ನಲ್ಲಿ ರಷ್ಯಾದ ಸೈನಿಕರು ಉಕ್ರೇನಿಯನ್ ಸರ್ಕಾರಿ ಕಟ್ಟಡವನ್ನು ಸ್ಫೋಟಿಸಿದ ಭರಕ್ಕೆ ಕನ್ನಡಿಗ ವಿದ್ಯಾರ್ಥಿ ಕೂಡ ಪ್ರಾಣಬಿಟ್ಟಿದ್ದಾರೆ , ಉಕ್ರೇನ್ನ ಪರಿಸ್ಥಿತಿಯನ್ನು ವಿವರಿಸುತ್ತಾ ಮಾತನಾಡಿದ ವಿದ್ಯಾರ್ಥಿ ಶುಭಾಂಶು ‘ಅದೊಂದು ನರಕವಿದ್ದಂತೆ’ ಎಂದು ಹೇಳಿದ್ದಾರೆ.
ನೂರಾರು ಭಾರತೀಯ ವಿದ್ಯಾರ್ಥಿಗಳು ರೊಮೇನಿಯನ್ ಗಡಿಯನ್ನು ತಲುಪಲು ಮಾಡಿದ ದೀರ್ಘ ಪ್ರಯಾಣ ಹಾಗೂ ಉಕ್ರೇನ್ನಿಂದ ತಾಯ್ನಾಡಿನ ವಿಮಾನವನ್ನು ಏರಲು ಪಟ್ಟ ಪಾಡು ಎಲ್ಲವನ್ನು ಶುಭಾಂಶು ಎಳೆ ಎಳೆಯಾಗಿ ಬಿಚ್ಚಿಟ್ಟರು.
ನಾವು ವಿನ್ನಿಟ್ಸಿಯಾದಿಂದ ಗಡಿಗೆ ಪ್ರಯಾಣಿಸಿದೆವು. ಪ್ರಯಾಣವು ಅಸಮಂಜಸವಾಗಿತ್ತು. ನಮ್ಮ ಕಾಂಟ್ರ್ಯಾಕ್ಟರ್ಸ್ ಬಸ್‌ಗಳನ್ನು ವ್ಯವಸ್ಥೆಗೊಳಿಸಿದರು. ನಾವು ಸುಮಾರು 12 ಕಿಮೀ ನಡೆಯಬೇಕಾಗಿದ್ದರೂ ನಾವು ಸುರಕ್ಷಿತವಾಗಿ ಗಡಿಯನ್ನು ತಲುಪಿದ್ದೇವೆ. ಆದರೆ ಕಾಲ್ನಡಿಗೆಯು ಸಮಸ್ಯೆಯಾಗಿರಲಿಲ್ಲ. ಸಮಸ್ಯೆ ರೊಮೇನಿಯನ್ ಗಡಿಯನ್ನು ದಾಟುವುದಾಗಿತ್ತು. ಗಡಿ ದಾಟಲು ಅಸಾಧ್ಯವಾಯಿತು ಎಂದು ಶುಭಾಂಶು ಹೇಳಿದ್ದಾರೆ.
ವಿನ್ನಿಟ್ಸಿಯಾ ರಾಜಧಾನಿ ಕೈವ್‌ನಿಂದ 270 ಕಿಮೀ ದೂರದಲ್ಲಿದೆ, ಅಲ್ಲಿ ರಷ್ಯಾದ ಮತ್ತು ಉಕ್ರೇನಿಯನ್ ಪಡೆಗಳು ಬೀದಿ ಯುದ್ಧಗಳಲ್ಲಿ ತೊಡಗಿವೆ.
ಗಡಿಯಲ್ಲಿ ಪರಿಸ್ಥಿತಿ ನರಕಸದೃಶವಾಗಿತ್ತು. ಕೆಲ ವಿದ್ಯಾರ್ಥಿಗಳು ಅಳುತ್ತಿದ್ದರು. ನಾನು ಇದನ್ನೆಲ್ಲ ನೋಡುತ್ತಿದ್ದೆ. ಗಡಿ ದಾಟಲು ಅವಕಾಶ ನೀಡಿ ಎಂದು ಬೇಡಿಕೊಂಡೆ. ಕೆಲವರು ಮೂರ್ಚೆ ಹೋಗಿದ್ದರು. ಮತ್ತೆ ಕೆಲವರು ಕಾಲಡಿಗೆ ಬೀಳುತ್ತಿದ್ದರು. ಕೆಲವು ವಿದ್ಯಾರ್ಥಿಗಳು ನಾ ಮುಂದು ತಾ ಮುಂದು ಎಂದು ಜಗಳವಾಡುತ್ತಿದ್ದರು. ಅಲ್ಲಿ ಯಾವುದೇ ಹಿಂಸಾಚಾರ ಇರಲಿಲ್ಲ ಎಂದು ಹೇಳಿದ್ದಾರೆ.