ಮನೆಗಳ ನಿರ್ಮಾಣಕ್ಕೆ ಉಕ್ಕಿನ ಬದಲಿಗೆ ಬಿದಿರನ್ನು ಬಳಸುವ ನೂತನ, ಪರಿಸರ ಸ್ನೇಹಿ ಕಟ್ಟಡಗಳನ್ನು ನಿರ್ಮಿಸುವ ವಿಧಾನವನ್ನು ಮೈಸೂರಿನ ವಿದ್ಯಾರ್ಥಿಗಳು ನಿರೂಪಿಸಿದ್ದಾರೆ.
ಉಕ್ಕಿಗೆ ಪರ್ಯಾಯವಾಗಿ ಕಡಿಮೆ ವೆಚ್ಚದ ಕಟ್ಟಡಗಳನ್ನು ನಿರ್ಮಿಸುವ ವಿಧಾನದ ಬಗ್ಗೆ ವಿದ್ಯಾವರ್ಧನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿವರಿಸಿದ್ದಾರೆ. ಬಿದಿರನ್ನು ಒಂದು ರೀತಿಯ ಬಲೆಯಾಗಿ ಪರಿವರ್ತಿಸಿ, ಅದರಿಂದ ವೃತ್ತಾಕಾರದ ಚಿಪ್ಪನ್ನು ತಯಾರಿಸಲಾಗಿದೆ. ಇದು 700 ಕೆಜಿ ತೂಕವನ್ನು ತಡೆದುಕೊಳ್ಳಬಲ್ಲದು.
ವಿದ್ಯಾರ್ಥಿಗಳಾದ ನಿಶಾಂತ್, ಕಾರ್ತಿಕ್ ಎಂಪಿ ಮತ್ತು ಮಹೇಂದ್ರ ಹಲ್ಮಂಡ್ಜೆ ಅವರಿಗೆ ಪ್ರಾಧ್ಯಾಪಕ ಡಾ. ಉಮೇಶ ಪಿ.ಕೆ ಅವರು ಮಾರ್ಗದರ್ಶನ ನೀಡಿದ್ದಾರೆ. ಬಿದಿರಿನಿಂದ ಹಲವಾರು ಪ್ರಯೋಜನಗಳಿವೆ. ಇದು ಹಗುರವಾಗಿರುವುದಲ್ಲದೆ, ಕಡಿಮೆ ವೆಚ್ಚ ಹಾಗೂ ನಿರ್ವಹಣೆ, ತುಕ್ಕು ನಿರೋಧಕ ಹಾಗೂ ಆರ್ಥಿಕವಾಗಿಯೂ ಸಹಾಯವಾಗಲಿದೆ ಎಂದು ಪ್ರಾಧ್ಯಾಪಕರು ವಿವರಿಸಿದ್ದಾರೆ.
ಕಟ್ಟಡ ನಿರ್ಮಾಣ ಸಾಮಾಗ್ರಿಯಾಗಿ ಬಿದಿರನ್ನು ಹೆಚ್ಚಾಗಿ ಬಳಸುವುದರಿಂದ. ಇದು ಬಿದಿರಿನ ಕೃಷಿಯನ್ನು ಉತ್ತೇಜಿಸಲು ಕೂಡ ಸಹಾಯ ಮಾಡುತ್ತದೆ. ಅಲ್ಲದೆ, ಗಾಳಿಯಲ್ಲಿ ಇಂಗಾಲದ ಡೈ ಆಕ್ಸೈಡ್ ಅನ್ನು ಕಡಿಮೆ ಮಾಡುತ್ತದೆ. ಒಂದು ಟನ್ ಉಕ್ಕನ್ನು ಉತ್ಪಾದಿಸಬೇಕೆಂದ್ರೆ, 2.4 ಟನ್ ಗಳಷ್ಟು ಇಂಗಾಲದ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೆ ಹೊರಸೂಸಲಾಗುತ್ತದೆ. ಹೀಗಾಗಿ ಪರಿಸರ ಸ್ನೇಹಿ ಬಿದಿರಿನ ಬಳಕೆಯಿಂದ ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ಅನ್ನು ಕಡಿಮೆ ಮಾಡಲು ಇದು ಸಹಕಾರಿಯಾಗುತ್ತದೆ ಎಂದು ವಿದ್ಯಾರ್ಥಿ ನಿಶಾಂತ್ ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಕಳೆದ ವರ್ಷ ಈ ಯೋಜನೆಯನ್ನು ಅತ್ಯುನ್ನತ ವೈಜ್ಞಾನಿಕ ಸಾಧನೆ ಎಂದು ಹೆಸರಿಸಿದೆ.