ಮಕ್ಕಳನ್ನು ಬೆಳಗ್ಗೆ ಬೇಗನೆ ಎಬ್ಬಿಸಿ, ಅವರನ್ನು ತಯಾರು ಮಾಡಿ ಶಾಲೆಗೆ ಕಳುಹಿಸಬೇಕಾದ್ರೆ ಪೋಷಕರು ಸುಸ್ತಾಗಿಬಿಡುತ್ತಾರೆ. ಬೆಳಗ್ಗೆ ಬೇಗನೆ ಎದ್ದೇಳಲು ಮಕ್ಕಳು ಬಹಳ ಕಷ್ಟಪಡುತ್ತಾರೆ. ಅಂಥಾದ್ರಲ್ಲಿ ಇಲ್ಲೊಬ್ಬ ಬಾಲಕ ಮಾಡುವ ಕೆಲಸ ನೋಡಿದ್ರೆ ಅಚ್ಚರಿಪಡ್ತೀರಾ..!
ಹೌದು, ಆರು ವರ್ಷದ ಬಾಲಕನೊಬ್ಬ ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಎದ್ದು, ತಾನೇ ಅಡುಗೆ ಮಾಡಿಕೊಂಡು ಶಾಲೆಗೆ ಹೋಗುವ ಮುನ್ನ ಮನೆಕೆಲಸಗಳನ್ನು ಮಾಡುತ್ತಾನೆ. ಈತನ ನಿತ್ಯದ ದಿನಚರಿಯ ವಿಡಿಯೋವನ್ನು ಪೋಷಕರು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.
ಅಷ್ಟಕ್ಕೂ ಈ ಪುಟ್ಟ ಪೋರ ಏನೇನು ಕೆಲಸ ಮಾಡುತ್ತಾನೆ ಎಂದು ಕೇಳಿದ್ರೆ ಶಾಕ್ ಆಗೋದು ಪಕ್ಕಾ..! ಬೆಳಗ್ಗೆ 6 ಗಂಟೆಗೆ ಅಲಾರಾಂ ಮೊಳಗಿದಾಗ ಹಾಸಿಗೆಯಿಂದ ಎದ್ದ ಬಾಲಕ ಬಟ್ಟೆಗಳನ್ನು ಐರನ್ ಮಾಡುತ್ತಾನೆ. ನಂತರ ಬಟ್ಟೆ ಧರಿಸಿ, ಹಲ್ಲುಜ್ಜಿ ಮುಖ ತೊಳೆಯುತ್ತಾನೆ. ಅಲ್ಲಿಂದ ಸೀದಾ ಅಡುಗೆ ಮನೆಗೆ ಎಂಟ್ರಿ ಕೊಟ್ಟು ಮೊಟ್ಟೆಗಳನ್ನು ಬೇಯಿಸುತ್ತಾನೆ.
ಬೆಳಗ್ಗಿನ ಉಪಾಹಾರ ತಿಂದ ಬಳಿಕ ತನ್ನ ಬಟ್ಟಲು ಮತ್ತು ಟೀ ಕಪ್ ಅನ್ನು ತೊಳೆಯುತ್ತಾನೆ. ನಂತರ ಸ್ನಾನಗೃಹ, ಶೌಚಾಲಯವನ್ನು ಸ್ವಚ್ಫಗೊಳಿಸಿ, ಕೊಳಕು ಬಟ್ಟೆಗಳನ್ನು ವಾಷಿಂಗ್ ಮೆಷಿನ್ ಗೆ ತುಂಬುತ್ತಾನೆ. ವ್ಯಾಕ್ಯೂಮ್ ಕ್ಲೀನರ್ ನಿಂದ ತನ್ನ ಹಾಸಿಗೆಯನ್ನು ಸ್ವಚ್ಛಗೊಳಿಸುತ್ತಾನೆ. ಅಷ್ಟೇ ಅಲ್ಲ ಅದರ ಜೊತೆಗೆ ಕೋಣೆಯ ನೆಲವನ್ನು ಕೂಡ ಒರೆಸುತ್ತಾನೆ.
ಇತ್ತ ಮಂಚದ ಮೇಲೆ ವಿಶ್ರಾಂತಿ ಪಡೆಯುತ್ತಿರುವ ತನ್ನ ತಾಯಿಯ ಕಾಲಿಗೆ ಸ್ಪಾ ಟ್ರೀಟ್ ಮೆಂಟ್ ಮಾಡುತ್ತಾನೆ. ಶಾಲೆಗೆ ಹೊರಡುವ ಮುನ್ನ ಶೂ ಪಾಲಿಶ್ ಮಾಡುತ್ತಾನೆ. ಈ ವಿಡಿಯೋವನ್ನು ಬಾಲಕನ ಪೋಷಕರು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದು, 26 ದಶಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಷ್ಟೆಲ್ಲಾ ಕೆಲಸ ಮಾಡುತ್ತಿರುವುದನ್ನು ನೋಡಿದ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.