ಪ್ರತಿದಿನ ಹೊಸಹೊಸ ಟ್ರೆಂಡ್ ಗಳು ಫ್ಯಾಷನ್ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುತ್ತವೆ. ನಿಮಗೆ ಯಾವ ಶೈಲಿಯ ವಸ್ತುಗಳು ಬೇಕೋ ಅಥವಾ ಕಲ್ಪನೆಗೂ ಮೀರಿದ ವಸ್ತುಗಳು ನಿಮ್ಮ ಕೈ ಸೇರುತ್ತವೆ. 100 ರೂ., 200 ರೂ.ದಿಂದ ಹಿಡಿದು ಕೋಟಿ ರೂ.ಗಳವರೆಗೂ ಫ್ಯಾಷನ್ ವಸ್ತುಗಳಿಗೇನೂ ಕೊರತೆಯಿಲ್ಲ. ಅಂದಹಾಗೆ, ಈ ಸಾಲಿಗೆ ಇದೀಗ ವಿಭಿನ್ನ ಶೈಲಿಯ ಹ್ಯಾಂಡ್ ಬ್ಯಾಗ್ ಒಂದು ಸೇರ್ಪಡೆಯಾಗಿದೆ. ಇದನ್ನು ನೋಡಿದ ಜನರು ಹೀಗೂ ಉಂಟೆ ಅಂತಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಖ್ಯಾತ ಆಹಾರ ಕಲಾವಿದ ಹಾಗೂ ಮಾಲಿಕ್ಯೂಲಾರ್ ಗ್ಯಾಸ್ಟ್ರೊನಿಮಿಸ್ಟ್ ಓಮರ್ ಸರ್ತವಿ ಅವರು ಕಿತ್ತಳೆ ಹಣ್ಣಿನ ಸಿಪ್ಪೆಗಳಿಂದ ಹ್ಯಾಂಡ್ ಬ್ಯಾಗ್ ಅನ್ನು ತಯಾರಿಸಿದ್ದಾರೆ. ಡಿಜಿಟಲ್ ಫ್ಯಾಬ್ರಿಕೇಷನ್ ನ ಸಹಾಯದಿಂದ ಲೇಸರ್ ಹಾಗೂ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಈ ಬ್ಯಾಗ್ನ್ನು ತಯಾರಿಸಿದ್ದಾರೆ. ಈ ಹ್ಯಾಂಡ್ ಬ್ಯಾಗ್ ಅನ್ನು ತಯಾರಿಸಲು ಅವರಿಗೆ ಸುಮಾರು ಎರಡು ವಾರಗಳು ಬೇಕಾಗಿದೆ.
ಇದರ ವಿಡಿಯೋ ಹಾಗೂ ಫೋಟೋವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಓಮರ್ ಪೋಸ್ಟ್ ಮಾಡಿದ್ದಾರೆ. ಹಣ್ಣುಗಳು ಹಾಗೂ ತರಕಾರಿ ಸಿಪ್ಪೆಗಳನ್ನು ಬಿಸಾಡುವ ಬದಲು ಅದನ್ನು ಪರಿಸರ ಸ್ನೇಹಿ, ಐಷಾರಾಮಿ ವಸ್ತುಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿ ಫ್ಯಾಷನ್ ವಸ್ತುಗಳು, ಐಷಾರಾಮಿ ಬ್ಯಾಗ್ಗಳನ್ನು ತಯಾರಿಸಿದ್ದಾಗಿ ಓಮರ್ ತಿಳಿಸಿದ್ದಾರೆ.
ಹಣ್ಣು ಹಾಗೂ ತರಕಾರಿ ಸಿಪ್ಪೆಗಳನ್ನು ಉಪಯೋಗಿಸಿ ಓಮರ್ ಅವರು ಫ್ಯಾಷನ್ ವಸ್ತುಗಳನ್ನು ತಯಾರಿಸಿದ್ದು ಇದೇ ಮೊದಲೇನಲ್ಲ. ಬದನೆ ಕಾಯಿ ಸಿಪ್ಪೆಗಳಿಂದ ಈ ಹಿಂದೆ ಅವರು ಮಾಸ್ಕ್ ತಯಾರಿಸಿ ಸುದ್ದಿಯಾಗಿದ್ದರು.