
ಹೌದು, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಮನಕರಗೋ ವಿಡಿಯೋವೊಂದು ವೈರಲ್ ಆಗಿದೆ. ನವಿಲು, ತನ್ನ ಸತ್ತ ಒಡನಾಡಿಯನ್ನು ಹೊತ್ತೊಯ್ಯುತ್ತಿದ್ದ ಇಬ್ಬರು ವ್ಯಕ್ತಿಗಳ ಬೆನ್ನ ಹಿಂದೆಯೇ ಹೋಗುತ್ತಿರುವ ದೃಶ್ಯ ನೋಡಿದ್ರೆ ಎಂಥಾ ಕಲ್ಲುಹೃದಯವೂ ಕರಗದೆ ಇರಲಾರದು. ನಾಲ್ಕು ವರ್ಷಗಳಿಂದ ತನ್ನ ಒಡನಾಡಿಯೊಂದಿಗೆ ವಾಸಿಸುತ್ತಿದ್ದ ನವಿಲು, ಸತ್ತ ನಂತರವೂ ಕಳುಹಿಸಿಕೊಡಲು ಅದರ ಮನ ಒಪ್ಪಿಲ್ಲ.
ಇಬ್ಬರು ವ್ಯಕ್ತಿಗಳು ನವಿಲಿನ ಸಹಚರನ ಮೃತ ದೇಹವನ್ನು ಹೊತ್ತೊಯ್ದಾಗ, ಸದ್ದಿಲ್ಲದೆ ಅವರಿಬ್ಬರ ಹಿಂದೆಯೇ ಭಾರದ ಹೆಜ್ಜೆಗಳನ್ನಿಡುತ್ತಾ ಸಾಗಿದೆ. ಈ ಹೃದಯಸ್ಪರ್ಶಿ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಕುಚೇರಾ ಪಟ್ಟಣದಲ್ಲಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಈ ವಿಡಿಯೋವನ್ನು ಸುಮಾರು 1.26 ಲಕ್ಷ ಮಂದಿ ವೀಕ್ಷಿಸಿದ್ದು, ನವಿಲಿನ ಮೂಕರೋಧನೆ ಕಂಡು ಅನೇಕರ ಮನಮಿಡಿದಿದೆ. ಪ್ರಾಣಿ-ಪಕ್ಷಿಗಳು ಮನುಷ್ಯರಿಗಿಂತ ಸಹಬಾಳ್ವೆಯ ಜೀವನ ನಡೆಸುತ್ತವೆ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.