ಕಿರುತೆರೆ ನಟಿ ಚೇತನಾ ರಾಜ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವೇಳೆ ದಿಢೀರ್ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ತಾವು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ವಿಷಯವನ್ನು ಚೇತನಾ ರಾಜ್ ತಮ್ಮ ಕುಟುಂಬದವರಿಗೂ ತಿಳಿಸಿರಲಿಲ್ಲವೆಂದು ಹೇಳಲಾಗಿದೆ.
ಇದು ಕೇವಲ ಒಂದು ದಿನದ ಚಿಕಿತ್ಸೆ. ಬಳಿಕ ಮನೆಗೆ ತೆರಳಬಹುದು ಎಂದು ವೈದ್ಯರು ಹೇಳಿದ್ದ ಹಿನ್ನೆಲೆಯಲ್ಲಿ ಚೇತನಾ ರಾಜ್ ತಮ್ಮ ಕುಟುಂಬದವರಿಗೆ ಈ ವಿಷಯ ತಿಳಿಸಿರಲಿಲ್ಲವೆಂದು ಹೇಳಲಾಗಿದೆ. ಆದರೆ ಶಸ್ತ್ರಚಿಕಿತ್ಸೆಯ ಬಳಿಕ ಅವರ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡ ಪರಿಣಾಮ ಉಸಿರಾಟಕ್ಕೆ ತೊಂದರೆಯಾಗಿ ಚೇತನಾ ರಾಜ್ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇದರ ಜೊತೆಜೊತೆಗೆ ದೇಹದ ಕೊಬ್ಬು ಕರಗಿಸಲು ಮಾಡಿಸಿಕೊಳ್ಳುವ ಕಾಸ್ಮೆಟಿಕ್ ಸರ್ಜರಿ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯೂ ಮೂಡಿದೆ. ಏಕೆಂದರೆ ಈ ಹಿಂದೆ ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ನಟ ಬುಲೆಟ್ ಪ್ರಕಾಶ್ ಬಳಿಕದ ಅಡ್ಡ ಪರಿಣಾಮಗಳಿಂದಾಗಿ ಇತರ ಸಮಸ್ಯೆಗಳಿಗೆ ತುತ್ತಾಗಿ 2020ರಲ್ಲಿ ಕೊನೆಯುಸಿರೆಳೆದಿದ್ದರು.
ಇನ್ನು ಟಾಲಿವುಡ್ ನಟಿ ಆರತಿ ಅಗರ್ವಾಲ್ ಕೂಡ ಫ್ಯಾಟ್ ಸರ್ಜರಿಗೆ ಒಳಗಾದ ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದರು. ನಟಿ ಶ್ರೀದೇವಿ, ನಟ ರಾಕೇಶ್ ಕೂಡ ಕಾಸ್ಮೆಟಿಕ್ ಸರ್ಜರಿಗೆ ಒಳಗಾದ ಬಳಿಕ ಅಕಾಲಿಕ ಸಾವಿಗೆ ತುತ್ತಾದರು ಎಂಬ ಮಾತುಗಳು ಈಗಲೂ ಕೇಳಿಬರುತ್ತಿವೆ.
ಹೀಗಾಗಿ ಫ್ಯಾಟ್ ಸರ್ಜರಿ ಅಥವಾ ಕಾಸ್ಮೆಟಿಕ್ ಸರ್ಜರಿ ಸೇರಿದಂತೆ ಇನ್ನಿತರೆ ಮಾರ್ಗಗಳ ಮೂಲಕ ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುವ ಬದಲು ನೈಸರ್ಗಿಕ ವಿಧಾನ ಅನುಸರಿಸುವುದು ಸೂಕ್ತ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.