ಕೆಲವು ನಿರ್ದಿಷ್ಟ ಹಣ್ಣುಗಳನ್ನು ನಿಯಮಿತವಾಗಿ ತಿನ್ನುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದ ಪೋಷಕಾಂಶಗಳು ಸಿಗುತ್ತವೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ರೈತನ ಜೇಬನ್ನೂ ತುಂಬಿಸುವಂತಹ ಕೆಲವು ವಿಶೇಷ ಹಣ್ಣುಗಳಿವೆ. ಅವುಗಳಲ್ಲೊಂದು ಡ್ರ್ಯಾಗನ್ ಫ್ರೂಟ್. ಈ ಹಣ್ಣನ್ನು ಬೆಳೆದರೆ ರೈತರು ಲಕ್ಷಾಂತರ ರೂಪಾಯಿ ಸಂಪಾದಿಸಬಹುದು.
ಅಷ್ಟೇನೂ ರುಚಿಕರವಾಗಿರದಿದ್ದರೂ ಆರೋಗ್ಯಕ್ಕೆ ಇದು ಹೇಳಿ ಮಾಡಿಸಿದಂಥದ್ದು. ಅಷ್ಟೇ ಅಲ್ಲ ಡ್ರ್ಯಾಗನ್ ಫ್ರೂಟ್ ಬಲು ದುಬಾರಿ. ಈ ಹಣ್ಣನ್ನು ಬೆಳೆಸಲು ಹರಿಯಾಣ ಸರ್ಕಾರ 1.20 ಲಕ್ಷ ರೂಪಾಯಿ ಸಹಾಯ ಧನವನ್ನು ರೈತರಿಗೆ ನೀಡುತ್ತದೆ. ಇದರ ಲಾಭವನ್ನು ರೈತರು ಪಡೆದುಕೊಳ್ಳಬೇಕಿದೆ. ಇನ್ನು ಈ ಡ್ರ್ಯಾಗನ್ ಫ್ರೂಟ್ ಆರೋಗ್ಯಕ್ಕೆ ಯಾವೆಲ್ಲಾ ರೀತಿಯಲ್ಲಿ ಸಹಕಾರಿ ಅನ್ನೋದನ್ನು ನೋಡೋಣ.
ಡ್ರ್ಯಾಗನ್ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಕರೋನಾದಂತಹ ಸಾಂಕ್ರಾಮಿಕ ರೋಗಗಳು ಹರಡಿರುವ ಈ ಸಮಯದಲ್ಲಿ ಡ್ರ್ಯಾಗನ್ ಫ್ರೂಟ್ ಸೇವನೆ ಮಾಡುವುದು ಬಹಳ ಪ್ರಯೋಜನಕಾರಿ. ಡ್ರ್ಯಾಗನ್ ಫ್ರೂಟ್‌ನ ಮತ್ತೊಂದು ಪ್ರಯೋಜನವೆಂದರೆ ಇದು ನಿಮ್ಮನ್ನು ಯಾವಾಗಲೂ ಯಂಗ್ ಆಗಿಡಲು ಸಹಕರಿಸುತ್ತದೆ. ಏಕೆಂದರೆ ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ನಿಮ್ಮ ಯೌವನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಬಯಸುವವರು ಈ ಡ್ರ್ಯಾಗನ್ ಫ್ರೂಟನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದನ್ನು ತಿಂದರೆ ತೂಕವು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ ಜೊತೆಗೆ ಶಕ್ತಿಯೂ ಬರುತ್ತದೆ. ಹೃದಯದ ಆರೋಗ್ಯಕ್ಕೆ ಕೂಡ ಈ ಹಣ್ಣು ಸಹಕಾರಿಯಾಗಿದೆ. ಹೃದಯವು ಕ್ರಮೇಣ ದುರ್ಬಲಗೊಳ್ಳುತ್ತಿದೆ ಎಂಬ ಭಾವನೆ ನಿಮಗಿದ್ದರೆ ಡ್ರ್ಯಾಗನ್ ಫ್ರೂಟ್ ಸೇವಿಸಿ. ಇದು ನಿಮ್ಮ ಹೃದಯವನ್ನು ಫಿಟ್ ಆಗಿಡುತ್ತದೆ.