ಬಾಳೆಹಣ್ಣು ಪೋಷಕಾಂಶಗಳ ಆಗರ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರೆ ಸಂಶೋಧನೆಯೊಂದು ಬಾಳೆಹಣ್ಣು ಸೇವನೆಯಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಬಹುದು ಎಂಬುದನ್ನು ದೃಢಪಡಿಸಿದೆ.
ಬಾಳೆಹಣ್ಣಿನಲ್ಲಿರುವ ಕೆರೊಟೆನಾಯ್ಡ್ ಕಣ್ಣಿನ ದೃಷ್ಟಿಯನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ ಎಂದಿದೆ ಈ ಅಧ್ಯಯನ. ಕೆರೊಟೆನಾಯ್ಡ್ ಎಂದರೆ ಹಳದಿ, ಕೆಂಪು ಅಥವಾ ಕೇಸರಿ ಬಣ್ಣಕ್ಕೆ ಕಾರಣವಾಗುವ ಒಂದು ಅಂಶ. ಇದು ಬಾಳೆಹಣ್ಣಿನಲ್ಲಿ ಹೇರಳವಾಗಿದ್ದು ನಿತ್ಯ ಇದನ್ನು ಸೇವಿಸುವವರು ಅತ್ಯುತ್ತಮ ಆರೋಗ್ಯ ಪಡೆಯುತ್ತಾರೆ ಎಂಬುದು ದೃಢಪಟ್ಟಿದೆ. ಇದು ಕ್ಯಾನ್ಸರ್ ಮತ್ತು ಇತರ ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟಲೂ ಸಹಕಾರಿ ಎನ್ನಲಾಗಿದೆ.
ಇದರಲ್ಲಿ ವಿಟಮಿನ್ ಎ ಕೂಡಾ ಹೇರಳವಾಗಿದ್ದು ದೃಷ್ಟಿಯನ್ನು ಮತ್ತಷ್ಟು ತೀಕ್ಷ್ಣಗೊಳಿಸಲು ಇದು ಸಹಕರಿಸುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು ರಾತ್ರಿ ಮಲಗುವ ಮುನ್ನ ಒಂದು ಅಥವಾ ಎರಡು ಬಾಳೆಹಣ್ಣು ತಿನ್ನುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
ಮಕ್ಕಳಿಗೆ ನಿತ್ಯ ಒಂದು ಬಾಳೆಹಣ್ಣು ತಿನ್ನಲು ಕೊಟ್ಟರೆ ಸಾಕು, ಅವರ ರೋಗ ನಿರೋಧಕ ಶಕ್ತಿ ಸಹಜವಾಗಿಯೇ ಹೆಚ್ಚುತ್ತದೆ. ದಣಿದು ಬಂದ ದೇಹಕ್ಕೆ ಮತ್ತೆ ಶಕ್ತಿಯನ್ನು ತುಂಬುವ ಬಾಳೆಹಣ್ಣನ್ನು ನಿತ್ಯ ಸೇವಿಸಿ. ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.