ಸಾಮಾನ್ಯವಾಗಿ ಸ್ಮಶಾನದಲ್ಲಿ ಪುರುಷರು ನಿರ್ವಹಣೆ ಮಾಡುತ್ತಾರೆ. ಆದರೆ ಪಶ್ಚಿಮ ಬಂಗಾಳದ ಬರುಯಿಪುರದ ಪುರಂದರಪುರ ಸ್ಮಶಾನವು ಇದಕ್ಕೆ ಹೊರತಾಗಿದೆ. ಇಲ್ಲಿ, ಮಹಿಳೆ ಉಸ್ತುವಾರಿಯಾಗಿದ್ದಾರೆ. ಮೃತದೇಹಗಳ ಹೆಸರು ನೋಂದಾಯಿಸುವುದರಿಂದ ಹಿಡಿದು ಬೆಂಕಿ ಕೊಡುವರೆಗೂ ಈಕೆಯದ್ದೇ ಕೆಲಸ. ಬರುಯಿಪುರದ ತುಂಪಾ ದಾಸ್ 14 ಗಂಟೆಗಳ ನಿರಂತರ ಕರ್ತವ್ಯ ಮಾಡಿಕೊಂಡು ಬಂದಿದ್ದಾರೆ.
ಸ್ಮಶಾನದ ಆಚರಣೆಗಳ ಬಗ್ಗೆ ತನ್ನ ಕಾರ್ಯಕ್ಕಾಗಿ ಆಕೆ ಪ್ರಶಂಸೆಗೆ ಪಾತ್ರಳಾಗಿದ್ದು, ಬರುಯಿಪುರದ ಕಲ್ಯಾಣಪುರ ಪಂಚಾಯತ್ನ ಪುರಂದರಪುರ ಜೋರ ಮಂದಿರದ ಬಳಿ ತುಂಪಾ ದಾಸ್ ಮನೆ ಇದೆ. ಆಕೆಯ ತಂದೆ ಬಾಪಿ ದಾಸ್ ಈ ಹಿಂದೆ ಪುರಂದರಪುರ ಸ್ಮಶಾನದ ಉಸ್ತುವಾರಿ ಹೊಂದಿದ್ದರು.
ಆಕೆಯ ತಂದೆ ಬಹಳ ವರ್ಷಗಳ ಹಿಂದೆ ನಿಧನರಾದರು ಹೀಗಾಗಿ ಕುಟುಂಬವನ್ನು ಪೋಷಿಸಲು ಸ್ಮಶಾನದ ಜವಾಬ್ದಾರಿ ಮನೆಯ ಹಿರಿಯಳಾದ ಈಕೆಯ ಮೇಲೆ ಬಿದ್ದಿತು. ಈಕೆಯೊಂದಿಗೆ ತಂಗಿ ಮತ್ತು ತಾಯಿ ಇದ್ದಾರೆ.
ಈ ಸ್ಮಶಾನದಲ್ಲಿ ಕಟ್ಟಿಗೆಯಿಂದ ಸುಡುವ ಮತ್ತು ವಿದ್ಯುತ್ ಚಿತಾಗಾರವನ್ನೂ ಸಹ ಹೊಂದಿದೆ. ಮೃತ ದೇಹಗಳು ಸ್ಮಶಾನಕ್ಕೆ ಬಂದಾಗ ಹೆಸರುಗಳನ್ನು ನೋಂದಾಯಿಸುವುದರಿಂದ ಈಕೆಯ ಕೆಲಸ ಪ್ರಾರಂಭವಾಗುತ್ತದೆ. ನಂತರ ಶವವನ್ನು ಅಂತಿಮ ಸಂಸ್ಕಾರಕ್ಕೆ ಸಜ್ಜುಮಾಡಿಕೊಡುವುದು, ಸುಡುವ ಪ್ರಕ್ರಿಯೆ, ಮೂಳೆಗಳನ್ನು ತರುವುದು ಎಲ್ಲವನ್ನೂ ಈಕೆಯೇ ಮಾಡುತ್ತಾರೆ. ಬೆಳಿಗ್ಗೆ 6ರಿಂದ ರಾತ್ರಿ 8 ರವರೆಗೆ ನಿರಂತರ ಕರ್ತವ್ಯ ನಿರ್ವಹಿಸುವರು.
ಬರುಯಿಪುರದ ಕಲ್ಯಾಣಪುರ ಪಂಚಾಯತ್ ವ್ಯಾಪ್ತಿಯ ಜನ ಮಾತ್ರವಲ್ಲದೇ, ಸುತ್ತಮುತ್ತಲಿನ ಪಂಚಾಯತ್ ಪ್ರದೇಶಗಳ ಜನರು ಮೃತ ದೇಹಗಳೊಂದಿಗೆ ಈ ಸ್ಮಶಾನಕ್ಕೆ ಬರುತ್ತಾರೆ. ಹಾಗಾಗಿ ಜನಸಂದಣಿಯಾಗುತ್ತದೆ. ಆರಂಭದಲ್ಲಿ ನಾನು ಹೆದರುತ್ತಿದ್ದೆ ಎಂದು ಆಕೆ ಹೇಳಿಕೊಂಡಿದ್ದು, ಪಂಚಾಯತ್ನಿಂದ 3,500 ರೂಪಾಯಿ ಮಾಸಿಕ ವೇತನ ಪಡೆಯುತ್ತೇನೆ. ಮೂರು ಜನರ ಕುಟುಂಬ ನಿರ್ವಹಣೆ ಇದರಿಂದ ಕಷ್ಟ ಎಂದು ಹೇಳುತ್ತಾರೆ.
73 ವರ್ಷ ವಯಸ್ಸಿನ ಯಮುನಾ ದೇವಿ ಎಂಬವರು ಮಣಿಕರ್ಣಿಕಾ ಘಾಟ್ನಲ್ಲಿ ಇದೇ ರೀತಿ ಕಾರ್ಯನಿರ್ವಹಿಸುತ್ತಾರೆ.