ಜರ್ಮನಿಯ ಮಾರ್ಟಿನ್ ಲೂಥರ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂತಹ ಹೊಸ 3ಡಿ ಮುದ್ರಿತ ಉಂಗುರವೊಂದನ್ನು ಆವಿಷ್ಕರಿಸಿದ್ದಾರೆ. ಈ ಉಂಗುರ ಧರಿಸಿದ್ರೆ ಸೊಳ್ಳೆಗಳು, ಸಣ್ಣ ಪುಟ್ಟ ಕೀಟಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ. ದೀರ್ಘಕಾಲದವರೆಗೆ ಅವು ದೂರವಿರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಪ್ರಯೋಗ ಬಹಳ ಸಮಯದಿಂದ ನಡೆಯುತ್ತಿತ್ತು. ಕೊನೆಗೂ ಉಂಗುರವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಉಂಗುರದ ಮೂಲ ಮಾದರಿಯಲ್ಲಿ ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಐಆರ್-3535 ಎಂಬ ಪರಿಣಾಮಕಾರಿ ವಸ್ತುವನ್ನು ವಿಜ್ಞಾನಿಗಳ ತಂಡ ಬಳಸಿದೆ. ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್‌ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ
ಉಂಗುರದಿಂದ ಸೊಳ್ಳೆ ವಿರೋಧಿ ಅಂಶ ಸ್ರವಿಸುವುದರಿಂದ ಮನುಷ್ಯರ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಜೈವಿಕ ವಿಘಟನೀಯ ಪಾಲಿಮರ್‌ಗಳಲ್ಲಿ ಸೊಳ್ಳೆ ನಿವಾರಕ ದ್ರವವನ್ನು ನಿಯಂತ್ರಿಸಲು ವಿಜ್ಞಾನಿಗಳು ವಿಶೇಷ 3D ಮುದ್ರಣ ತಂತ್ರಜ್ಞಾನವನ್ನು ಬಳಸಿದ್ದಾರೆ. ಈ ಮೂಲಕ ಡೆಂಗ್ಯೂ ಮತ್ತು ಮಲೇರಿಯಾವನ್ನು ಹರಡುವ ಸೊಳ್ಳೆಗಳನ್ನು ಜನರಿಂದ ದೂರವಿಡಬಹುದು ಅನ್ನೋದು ವಿಜ್ಞಾನಿಗಳ ಅಭಿಪ್ರಾಯ. ಈ ಉಂಗುರದ ಮಾದರಿ ಸಿದ್ಧವಾಗುವ ಮುನ್ನವೇ ಸೊಳ್ಳೆ ನಿವಾರಕ ಉತ್ಪನ್ನವಾಗಿ ಬಳೆ ತಯಾರಿಸುವ ಬಗ್ಗೆಯೂ ಸಂಶೋಧಕರ ತಂಡ ಚಿಂತನೆ ನಡೆಸಿತ್ತು.
ಈ ರಿಂಗ್ 7 ದಿನಗಳವರೆಗೆ ಸೊಳ್ಳೆಗಳಿಂದ ರಕ್ಷಣೆ ನೀಡುತ್ತದೆ ಈ ಉಂಗುರವನ್ನು ತಯಾರಿಸಲು ವಿಶೇಷ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ರಿಂಗ್ ನಲ್ಲಿರುವ ದ್ರವವನ್ನು ಸಾಮಾನ್ಯವಾಗಿ ಸ್ಪ್ರೇ ಅಥವಾ ಲೋಷನ್ ರೂಪದಲ್ಲಿ ಬಳಸಲಾಗುತ್ತದೆ, ಇದು ಸೊಳ್ಳೆಗಳಿಂದ ಹಲವಾರು ಗಂಟೆಗಳ ಕಾಲ ರಕ್ಷಣೆ ನೀಡುತ್ತದೆ. ಅನೇಕ ಪ್ರಯೋಗಗಳ ನಂತರ ವಿಜ್ಞಾನಿಗಳು ಮಾನವ ದೇಹದ 37 ಡಿಗ್ರಿ ತಾಪಮಾನದಲ್ಲಿ, ಈ ಉಂಗುರದಲ್ಲಿರುವ ದ್ರವವು ಖಾಲಿಯಾಗಲು ಒಂದು ವಾರಕ್ಕಿಂತ ಹೆಚ್ಚು ಸಮಯ ಬೇಕು ಎಂದು ಅಂದಾಜಿಸಿದ್ದಾರೆ. ಹಾಗಾಗಿ ಒಮ್ಮೆ ಈ ಉಂಗುರು ಧರಿಸಿದ್ರೆ ಒಂದು ವಾರ ಸೊಳ್ಳೆಗಳು ನಿಮ್ಮ ಬಳಿ ಸುಳಿಯುವುದಿಲ್ಲ. ಉಂಗುರದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಪ್ರಯೋಗ ನಡೆಯುತ್ತಿದೆ.